ಖಾಸಗಿ ವಾಹನಗಳಲ್ಲಿ ಲಾಂಛನ,ಸಂಘ-ಸಂಸ್ಥೆಗಳ ಹೆಸರು ಬಳಕೆ: ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಖಾಸಗಿ ವಾಹನಗಳ ಮೇಲೆ ಯಾವುದೇ ಹೆಸರು, ಚಿನ್ನೆ, ಲಾಂಛನ ಹಾಗೂ ಸಂಘ-ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಆದರೂ ನಿರ್ಬಂಧವನ್ನು ಪಾಲಿಸದೆ ಕೆಲವು ವಾಹನ ಸವಾರರು ಈಗಲೂ ತಮ್ಮ ಖಾಸಗಿ ವಾಹನದ ಮೇಲೆ ಅನಧಿಕೃತ ನೊಂದಣಿ ಫಲಕಗಳನ್ನು ಅಳವಡಿಸಿಕೊಂಡಿರುವುದು ತಿಳಿದು ಬಂದಿದೆ. ಈ ಬಗ್ಗೆ ಗಮನಿಸಿರುವ ಹೈಕೋರ್ಟ್ ರಾಜ್ಯದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕರು, ತಮ್ಮ ಖಾಸಗಿ ವಾಹನಗಳ ಮೇಲೆ ಯಾವುದೇ ಹೆಸರು, ಚಿನ್ಹೆ, ಲಾಂಛನ ಹಾಗೂ ಸಂಘ-ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಂಡಿದ್ದರೇ ಅದನ್ನು ತೆಗೆದು ಹಾಕುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಖಡಕ್ ಸೂಚನೆ ನೀಡಿದೆ.

ಈ ಕುರಿತಂತೆ ವಿಧಾನಪರಿಷತ್ತಿನ ಎಲ್ಲಾ ಸದಸ್ಯರಿಗೆ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ ಪತ್ರ ಬರೆದಿದ್ದು, ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 59 ಮತ್ತು 51 ಹಾಗೂ ಎಂಬ್ಲಂಮ್ಸ್ ಆಂಡ್ ನೇಮ್ ಆಕ್ಟ್ 1950 ಕಲಂ 3, 4 ಮತ್ತು 5ರ ಅನ್ವಯ ವಾಹನಗಳ ನೊಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ಹೆಸರುಗಳನ್ನು, ಚಿನ್ಹೆ, ಲಾಂಛನಗಳನ್ನು ಹಾಗೂ ಇತರೆ ಸಂಘ-ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದು ಕಾನೂನು ಬಾಹಿರವಾಗಿದ್ದು, ಅಂತಹ ಫಲಕಗಳನ್ನು ತೆರವುಗೊಳಿಸುವಂತೆ ಸಾರಿಗೆ ಇಲಾಖೆಯು ಪ್ರಕಟಣೆ ನೀಡಿತ್ತು.

ಆದರೂ ಅಂತಹ ಅನಧಿಕೃತ ನೊಂದಣಿ ಫಲಕಗಳನ್ನು ಪ್ರದರ್ಶಿಸಿಕೊಂಡು ರಸ್ತೆಯಲ್ಲಿ ಓಡಾಡುವಂತಹ ವಾಹನಗಳನ್ನು ಗಮನಿಸಿರುವ ಕರ್ನಾಟಕ ಉಚ್ಛ ನ್ಯಾಯಾಲಯವು 2020ರ ಜ. 22ರಲ್ಲಿ ಪ್ರಕರಣವೊಂದರ ವಿಚಾರಣೆಯಲ್ಲಿ  ಚುನಾಯಿತ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಮ್ಮ ಖಾಸಗಿ ವಾಹನಗಳ ಮೇಲೆ ಯಾವುದೇ ಹೆಸರು, ಚಿನ್ಹೆ, ಲಾಂಛನ ಹಾಗೂ ಸಂಘ-ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದು ನಿರ್ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಭಾಪತಿಯವರಿಗೆ ಸೂಚಿಸಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!