ಶಾಸನ ಸಭೆಯ ಮರ್ಯಾದೆ ಹರಾಜು ಹಾಕಿರುವ ಡಾ.ಸುಧಾಕರ್’ಗೆ ಶಾಸಕನಾಗಲೂ ಯೋಗ್ಯತೆ ಇಲ್ಲ: ಗೀತಾ ವಾಗ್ಳೆ

ಉಡುಪಿ (ಉಡುಪಿ ಟೈಮ್ಸ್ ವರದಿ): ಎಲ್ಲರೂ ಏಕಪತ್ನಿ ವೃತಸ್ತರಾ ಎಂಬ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಹೇಳಿಕೆ ಚುನಾವಣಾ ವ್ಯವಸ್ಥೆಗೇ ಮಾಡಿರುವ ಅವಮಾನ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಹೇಳಿದೆ. ಈ ಬಗ್ಗೆ ಮಾತನಾಡಿರುವ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು, ಕರ್ನಾಟಕ ಸರಕಾರದಲ್ಲಿ ಸಚಿವರಾಗಿರುವ ಡಾ. ಸುಧಾಕರ್ ಅವರು ಶಾಸಕರು, ಸಚಿವರು, ಮಾಜಿ ಮುಖ್ಯಮಂತ್ರಿ ಹೀಗೆ ಎಲ್ಲರ ಬಗ್ಗೆ ನೀಡಿರುವ ಬಹಿರಂಗ ಹೇಳಿಕೆ ಇಡೀ ಚುನಾವಣಾ ವ್ಯವಸ್ಥೆಗೆ ಮಾಡಿರುವ ಅವಮಾನವಾಗಿದೆ.

ಇದು ಶಾಸನ ಸಭೆಗೆ ಅಭ್ಯರ್ಥಿಗಳನ್ನು ಆರಿಸಿ ಕಳುಹಿಸಿರುವ ಮತದಾರರಿಗೆ ಮಾಡಿರುವ ಅವಮಾನವೂ ಆಗಿದೆ. ಡಾ. ಸುಧಾಕರ್ ಅವರ ಹೇಳಿಕೆಯ ಪ್ರಕಾರ ವಿಧಾನಸಭೆಯ ಎಲ್ಲಾ ಸದಸ್ಯರೂ ಅನೈತಿಕ ಸಂಬಂಧಗಳನ್ನು ಹೊಂದಿದ್ದಾರೆ ಎಂದಾದರೆ ಅದು ಇಡೀ ಚುನಾವಣಾ ವ್ಯವಸ್ಥೆಗೆ ಮಾಡಿರುವ ಅವಮಾನವಲ್ಲದೇ ಮತ್ತೇನು…? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಡಾ.ಸುಧಾಕರ್ ಸೇರಿದಂತೆ ಹಲವಾರು ಬಿಜೆಪಿ ಸಚಿವರು,ಶಾಸಕರು ಇತ್ತೀಚೆಗೆ ಚಿತ್ರವಿಚಿತ್ರ ಹೇಳಿಕೆಗಳನ್ನು ನೀಡುವುದರ ಮೂಲಕ ಲಗಾಮಿಲ್ಲದ ಕುದುರೆಗಳಂತೆ ಮನಬಂದಂತೆ ವರ್ತಿಸುತ್ತಿದ್ದಾರೆ.

ಇಂತಹವರಿಗೆ ಅಂಕುಶ ಹಾಕಿ ನಿಲ್ಲಿಸುವಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಫಲರಾಗಿದ್ದಾರೆ. ಶಾಸನ ಸಭೆಯ ಮರ್ಯಾದೆಯನ್ನು ಹರಾಜು ಹಾಕಿರುವ ಡಾ.ಸುಧಾಕರ್ ಅವರಿಗೆ  ಸಚಿವ ಸ್ಥಾನ ದಲ್ಲಿರುವ ಯೋಗ್ಯತೆ ಬಿಡಿ,ಶಾಸಕನಾಗಲೂ ಯೋಗ್ಯತೆ ಇಲ್ಲ.ಆದ್ದರಿಂದ ಅವರು ತಮ್ಮ ಶಾಸಕ ಹಾಗೂ ಸಚಿವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ನೀಡಬೇಕು.ಹಾಗೂ ತಮ್ಮ ಈ ಹೇಳಿಕೆಗಾಗಿ ಕರ್ನಾಟಕದ ಎಲ್ಲಾ ಮತದಾರರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಮಾತು ಮುಂದು ವರೆಸಿದ ಅವರು, ಈ ಎಲ್ಲಾ ಸದಸ್ಯರೂ ಆಯ್ಕೆಯಾಗಿ ಶಾಸಕರಾಗಿದ್ದಾರೆ ಎಂದಾದರೆ ಅದು ಚುನಾವಣಾ ವ್ಯವಸ್ಥೆಯಿಂದ. ಮಾತ್ರವಲ್ಲ, ಇವರನ್ನು ಆರಿಸಿ, ಶಾಸಕರನ್ನಾಗಿ ಮಾಡಿರುವುದು ಮತದಾರರು. ಸಚಿವರ ಈ ಹೇಳಿಕೆಯಿಂದಾಗಿ ಮತದಾರರು ತಲೆತಗ್ಗಿಸಬೇಕಾದ  ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ಇಡೀ ರಾಜ್ಯವನ್ನು ಪ್ರತಿನಿಧಿಸುವ ಸಚಿವರೊಬ್ಬರು  ಇಂತಹ ಹೇಳಿಕೆಯನ್ನು ನೀಡುತ್ತಾರೆ ಎಂದರೆ ನಮ್ಮ ರಾಜಕೀಯ ಕ್ಷೇತ್ರ ಇಂದು ಎಂತಹ ಅಪಾಯಕಾರಿ ಸ್ಥಿತಿಗೆ ಬಂದು ನಿಂತಿದೆ ಎಂದು ಯೋಚಿಸುವಂತಾಗಿದೆ. ವಿಧಾನಸಭೆಯಲ್ಲಿ ಬಹಳಷ್ಟು ಮಹಿಳಾ ಶಾಸಕರೂ ಇದ್ದಾರೆ. ಸಚಿವರ ಈ ಹೇಳಿಕೆ ಅವರನ್ನು ಎಷ್ಟು ಮುಜುಗರಕ್ಕೆ ತಳ್ಳಿರಬಹುದು.

ಅದೆಷ್ಟು ಶಾಸಕ/ಶಾಸಕಿಯರ ಸಂಸಾರದಲ್ಲಿ ಸಂಶಯಕ್ಕೆ ಎಡೆಮಾಡಿಕೊಟ್ಟಿರಬಹುದು ಇದೆಲ್ಲದರ ಬಗ್ಗೆ ಯೋಚಿಸದೇ ತಮ್ಮ ಮನ ಬಂದಂತೆ ನಾಲಿಗೆಯನ್ನು ಯದ್ವಾತದ್ವಾ ಹರಿಯಬಿಡುವುದು ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರಿಗೆ ಶೋಭೆ ತರುವಂತಹುದೇ ಎಂದು ಕೇಳಿದ್ದಾರೆ. ಇದರೊಂದಿಗೆ ಎಲ್ಲಕ್ಕಿಂತ ಮುಖ್ಯವಾಗಿ ಹೊಸತಾಗಿ ರಾಜಕೀಯ ರಂಗಕ್ಕೆ ಪ್ರವೇಶಿಸಿ, ಶಾಸಕರಾಗ ಬಯಸುವ ಮಹಿಳೆಯರು ಈ ಹೇಳಿಕೆಯ ನಂತರ ರಾಜಕೀಯಕ್ಕೆ ಬರುವ ಧೈರ್ಯ ಮಾಡಬಲ್ಲರೇ…? ಎಂದು ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!