ಮರೀನಾ ಯೋಜನೆ ಕೈಬಿಟ್ಟಿದ್ದೇವೆಂದು ಜಿಲ್ಲಾಡಳಿತ, ಶಾಸಕರು ಅಧಿಕೃತವಾಗಿ ಹೇಳಿಕೆ ನೀಡುವವರೆಗೆ ನಿರಂತರವಾಗಿ ಹೋರಾಟ
ಉಡುಪಿ: (ಉಡುಪಿ ಟೈಮ್ಸ್ ವರದಿ)ಪಡುಕರೆಯ ಸರ್ವ ಸಂಸ್ಥೆಗಳ ಒಕ್ಕೂಟದ ಮರೀನಾ ನಿರ್ಮಾಣದ ವಿರುದ್ಧದ ಹೋರಾಟಕ್ಕೆ ವಿವಿಧ ಸಂಘ ಸಂಸ್ಥೆಗಳು ಸೇರಿ 64 ಸಂಸ್ಥೆಗಳು ಕೈಜೋಡಿಸಿದ್ದು ಮತ್ತಷ್ಟು ಬಲ ಬಂದಂತಾಗಿದೆ. ಪಡುಕರೆಯ ಸರ್ವ ಸಂಸ್ಥೆಗಳ ಒಕ್ಕೂಟಕ್ಕೆ, ಮಲ್ಪೆ ಮೀನುಗಾರ ಸಂಘ ಹಾಗೂ ಅದರ ಸಹಸಂಸ್ಥೆಗಳೂ ಸೇರಿದಂತೆ ಕಾಪುವಿನಿಂದ ಬೆಂಗ್ರೆಯ ತನಕದ ಕರಾವಳಿಯ ಬಹುತೇಕ ಎಲ್ಲಾ ಭಜನಾ ಮಂದಿರ, ದೇವಸ್ಥಾನ, ಯುವಕ ಮಂಡಲ, ಮಾತೃಮಂಡಳಿಗಳು ಸೇರಿ 64 ಸಂಸ್ಥೆಗಳು ಜೊತೆಗೂಡಿವೆ. ಇದೀಗ ಮರೀನಾ ವಿರುದ್ಧ ಹೋರಾಡುವ ಸಲುವಾಗಿ ಈ ಸಂಘ ಸಂಸ್ಥೆಗಳು ಒಟ್ಟಾಗಿ ಸೇರಿ ಕರಾವಳಿಯ ಸರ್ವಸಂಸ್ಥೆಗಳ ಒಕ್ಕೂಟ, ಉಡುಪಿ ಜಿಲ್ಲೆ ಎಂಬ ಸಂಘಟನೆಯಾಗಿ ಮಾರ್ಪಟಿದ್ದಾರೆ.
ಇದೀಗ ಈ ಸ0ಘಟನೆಯ ವತಿಯಿಂದ ಮರೀನಾ ವಿರುದ್ದದ ತಮ್ಮ ಮುಂದಿನ ಹೋರಾಟದ ರೂಪು ರೇಷೆಗೆ ಮಾ.21 ರಂದು ಮಲ್ಪೆಯ ಏಳೂರು ಮೊಗವೀರ ಭವನದಲ್ಲಿ ಬೃಹತ್ ಸಭೆ ನಡೆಸಿ ಕೆಲವು ಬಹು ಮುಖ್ಯ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಅದರಂತೆ ಸಭೆಯಲ್ಲಿ ಮರೀನಾ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆಂದು ಜಿಲ್ಲಾಡಳಿತ ಆಥವಾ ಶಾಸಕರು ಅಧಿಕೃತವಾಗಿ ಹೇಳಿಕೆ ನೀಡುವವರೆಗೆ ನಿರಂತರವಾಗಿ ಹೋರಾಟ ನಡೆಸುವುದು.
ಹೆಜಮಾಡಿಯಿಂದ ಶಿರೂರು ತನಕದ ಎಲ್ಲಾ ಮೀನುಗಾರರು ಹಾಗೂ ಸಂಸ್ಥೆಗಳನ್ನು ಈ ಹೋರಾಟದಲ್ಲಿ ಸೇರಿಸಿಕೊಳ್ಳುವುದು. ಯೋಜನೆಯನ್ನು ವಿರೋಧಿಸಿ 64 ಸಂಸ್ಥೆಗಳ ವತಿಯಿಂದಲೂ ಬೃಹತ್ ಫ್ಲೆಕ್ಸ್ ಗಳನ್ನು ಅಳವಡಿಸುವುದು. ಯೋಜನೆಯಿಂದ ಸಂಪೂರ್ಣ ಮೀನುಗಾರಿಕೆ ನಾಶವಾಗುವ ಬಗೆಯನ್ನು ಪ್ರಧಾನ ಮಂತ್ರಿಯವರಿಗೆ ವಿವರಿಸಿ ಪತ್ರ ಬರೆಯುವುದು. ಸಂಪೂರ್ಣ ಕರಾವಳಿಯಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದು. ಮರೀನಾ ಅಪಾಯದ ಕುರಿತಾಗಿ ಸಂಪೂರ್ಣ ಮಾಹಿತಿ ನೀಡುವ ಉದ್ದೇಶದಿಂದ ಮಲ್ಪೆಬಂದರಿನ ಒಳಗೆ ಬೃಹತ್ ಸಭೆಯನ್ನು ಆಯೋಜಿಸಿ ಸಾಕ್ಷ್ಯಾಚಿತ್ರವನ್ನು ಪ್ರದರ್ಶಿಸುವುದು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಈ ಸಂದರ್ಭ ಸಭೆಯಲ್ಲಿ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಶಿವಪ್ಪ ಟಿ ಕಾಂಚನ್, ಹಿರಿಯ ಮೀನುಗಾರ ರಾಮಕಾಂಚನ್, ಶಿವರಾಮ ಪುತ್ರನ್, ಮಹಿಳಾ ಒಣ ಮೀನು ಮಾರಾಟಗಾರರ ಸಂಘದ ಅಧ್ಯಕ್ಷರಾದ ಜಲಜ ಕೋಟ್ಯಾನ್, ಪ್ರಕಾಶ್ ಮಲ್ಪೆ , ಪುರಂದರ ಕೋಟ್ಯಾನ್, ರಮೇಶ್ ಮೆಂಡನ್ ಉಪಸ್ಥಿತರಿದ್ದರು.