75 ಮನೆ ಬೆಳಗಿಸಿದ ಕಡಿಯಾಳಿ ಆಸರೆ ಚಾರಿಟೇಬಲ್ ಟ್ರಸ್ಟ್
ಕಡಿಯಾಳಿ: ಆಸರೆ ಚಾರಿಟೇಬಲ್ ಟ್ರಸ್ಟ್, ಬಡ ಕುಟುಂಬದ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡುವ ಮೂಲಕ ಮನೆ ಬೆಳಗುವ ಕೆಲಸವನ್ನು ಅನೇಕ ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ವರೆಗೆ 74 ಮನೆಗಳಿಗೆ ಬೆಳಕನ್ನು ನೀಡಿರುವ ಟ್ರಸ್ಟ್ ಈ ಭಾರಿ 75ನೇ ಮನೆಗೆ ವಿದ್ಯುತ್ ಪೂರೈಕೆ ಮಾಡುತ್ತಿದೆ.
ಹೌದು ಕಡಿಯಾಳಿಯ ಆಸರೆ ಚಾರಿಟೇಬಲ್ ಟ್ರಸ್ಟ್ ಮೂಲಕ 75ನೇ ಮನೆಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಈ ಭಾರಿ ಯುವ ಇಂಜಿನಿಯರ್ ರಾಕೇಶ್ ಜೋಗಿ ಅವರ ಪತ್ನಿ ಸ್ವಾತಿ ರಾಕೇಶ್ ಅವರು, ಉಡುಪಿ ನಗರದ 76ನೇ ಬಡಗಬೆಟ್ಟು ಬೈಲೂರು ಹನುಮಾನ್ ಗ್ಯಾರೇಜ್ ಬಳಿ ನಿವಾಸಿ ದಲಿತ ಸಮುದಾಯದ ಸುಧಾಕರ ಎಂಬವರ ಮನೆಗೆ ವಿದ್ಯುತ್ ಸಂಪರ್ಕ ಮಾಡುವುದರ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಉಡುಪಿಯ ಪ್ರಖ್ಯಾತ ಯುವ ಇಂಜಿನಿಯರ್ ರಾಕೇಶ್ ಜೋಗಿ, ಮತ್ತು ಸ್ವಾತಿ ರಾಕೇಶ್ ಜೋಗಿ ದಂಪತಿಗಳು 75ನೇ ಮನೆಗೆ ವಿದ್ಯುತ್ ನೀಡುವ ಕಾರ್ಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಕೃಷ್ಣ ರಾವ್ ಕೊಡಂಚ ತನ್ನ ಹುಟ್ಟುಹಬ್ಬಕ್ಕೆ ದಲಿತರ ಮನೆ ಬೆಳಗಿಸಿದ ಸ್ವಾತಿ ರಾಕೇಶ್ ಅವರನ್ನು ಅಭಿನಂದಿಸಿದರು. ಆಸರೆ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ವಿದ್ಯಾ ಶಾಂಸುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದರು. ಕಡಿಯಾಳಿ ಮಹಿಷಮರ್ದಿನಿ ಎಲೆಕ್ಟ್ರಿಕಲ್ಸ್ ನ ಆಶ್ವಥ್ ದೇವಾಡಿಗ ವಿದ್ಯುತ್ ಸಂಪರ್ಕವನ್ನು ನಿರ್ವಹಿಸಿದರು. ಈ ಸಂದರ್ಭ ಆಸರೆ ಚಾರಿಟೇಬಲ್ ಟ್ರಸ್ಟ್ ನ ಕೋಶಾಧಿಕಾರಿ ಸತೀಶ್ ಕುಲಾಲ್, ನಗರಸಭೆ ಮಾಜಿ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್, ಶ್ಯಾಮ್ ಸುಂದರ್, ವಿಘ್ನೇಶ್, ಯಶೋಧಾ ಸತೀಶ್, ಉಪಸ್ಥಿತರಿದ್ದರು.