ಕುಂದಾಪುರ: 16ನೇ ಶತಮಾನದ ತಿರುಮಲ ವೆಂಕಟರಮಣ ದೇವಾಲಯದ ಶಾಸನ ಪತ್ತೆ

ಕುಂದಾಪುರ: ಬಸ್ರೂರಿನ 16ನೇ ಶತಮಾನದ ಪ್ರಸಿದ್ಧ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ವಿನಾಯಕ ದೇವರ ಕಂಚಿನ ದೀಪಸ್ತಂಭದಲ್ಲಿ ಶಾಸನ ಪತ್ತೆಯಾಗಿದೆ. ಇದು 16ನೇ ಶತಮಾನದ ಪುರಾತನ ಪ್ರಸಿದ್ಧ ದೇವಸ್ಥಾನ ಆಗಿರುವುದರಿಂದ ಇಲ್ಲಿ ನೂರಾರು ವರ್ಷಗಳಿಂದ ದೀಪವನ್ನು ಹಚ್ಚಲಾಗುತ್ತಿದೆ. ಇದರಿಂದ ಈ ಕಂಚಿನ ದೀಪಸ್ತಂಭ ಕರಿ ಕಟ್ಟಿದ್ದು, ಆಮೆಯ ಹಣೆಯ ಮೇಲ್ಭಾಗದಲ್ಲಿ ಇದ್ದ ನಾಲ್ಕು ಸಾಲಿನ ಶಾಸನ ಯಾರ ಕಣ್ಣಿಗೂ ಬಿದ್ದಿರಲಿಲ್ಲ.

ಈ ನಡುವೆ ಬಸ್ರೂರಿನ ಯುವ ಬ್ರಿಗೇಡ್ ತಂಡ ದೇವಸ್ಥಾನದಲ್ಲಿ ಶ್ರಮದಾನ ಕೈಗೊಂಡಿದ್ದು, ದೇವಸ್ಥಾನದ ದೀಪಸ್ತಂಭವನ್ನು ಶುಚಿಕೊಳಿಸಲಾಗಿತ್ತು. ಈ ವೇಳೆ ಕಂಚಿನ ಸ್ತಂಭದ ಕೆಳಭಾಗ ಆಮೆಯ ಹಣೆಯ ಮೇಲ್ಭಾಗದಲ್ಲಿ ಇದ್ದ ನಾಲ್ಕು ಸಾಲಿನ ಶಾಸನ ಪತ್ತೆಯಾಗಿದೆ. ಸ್ಥಳೀಯ ನಿವಾಸಿಯಾಗಿರುವ ಪ್ರದೀಪ್ ಕುಮಾರ್ ಬಸರೂರು ಅವರು ಈ ಶಾಸನವನ್ನು ಮೊದಲು ಗಮನಿಸಿದ್ದು, ಬಳಿಕ ಇದನ್ನು ಜನರ ಗಮನಕ್ಕೆ ತಂದಿದ್ದಾರೆ.

ಈ ಅಪ್ರಕಟಿತ ಶಾಸನದಲ್ಲಿ  ನಾಲ್ಕು ಸಾಲುಗಳಿದ್ದು ಮೊದಲ ಸಾಲಿನಲ್ಲಿ  “ವಿನಾಯಕ ದೇವರ”, ಎರಡನೆ ಸಾಲಿನಲ್ಲಿ “ಕಂಚಿನ ಕಂಬ 1 ಕ್ಕೆ “, ಮೂರನೇ ಸಾಲಿನಲ್ಲಿ” ನಗ 29 ಕ್ಕೆ ಅಶಲು “ಹಾಗೂ ನಾಲ್ಕನೆ ಸಾಲಿನಲ್ಲಿ  49//3//0 ಎಂದು ಬರೆಯಲಾಗಿದೆ.
ಪುರಾತತ್ವ, ಶಾಸನ ಮತ್ತು ಪುರಾತನ ಮಾಪನ ತಜ್ಞರಾದ ಡಾ ಜಗದೀಶ್ ಅಗಸಿಬಾಗಿಲು ಅವರ ಅನಿಸಿಕೆ ಪ್ರಕಾರ ಈ ಶಾಸನದಲ್ಲಿ ಕಂಚಿನ ದೀಪಸ್ತಂಭವನ್ನು ನಿರ್ಮಾಣ ಮಾಡಲು ಬೇಕಾದ ಕಂಚು ಅಥವಾ ಅದಕ್ಕೆ ಆ ಕಾಲದಲ್ಲಿ ತಗಲುವ ವೆಚ್ಚವನ್ನು ಉಲ್ಲೇಖಿಸಲಾಗಿದೆ. ಸರಿಸುಮಾರು 49 ಸೇರು ಅಂದರೆ 45.73 ಕೆಜಿ ತೂಕದ ಅಂದರೆ, ಅಂದಿನ ಕಾಲದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯಕ್ಕೆ ಸಮನಾದ ಕಂಚನ್ನು ಈ ದೀಪಸ್ತಂಭದಲ್ಲಿ ಉಪಯೋಗಿಸಲಾಗಿದೆ.

ಇನ್ನೂ ಈ ಶಾಸನದಲ್ಲಿ ಉಲ್ಲೇಖಿಸಿರುವ ವಿನಾಯಕ ಶಿವ ಪುತ್ರ ಗಣಪತಿ ಅಲ್ಲದೇ ಸ್ವಯಂ ಗರುಡನೇ ಏಕೆಂದರೆ ಗರುಡನಿಗೆ ಇರುವ ಹಲವಾರು ಹೆಸರಿನಲ್ಲಿ ವಿನಾಯಕ ಸಹಾ ಒಂದು. ಆದರಿಂದ ಈ ವಿಶಿಷ್ಠವಾದ ದೀಪಸ್ತಂಭವನ್ನು ವಿನಾಯಕ ಸ್ತಂಭ ಅನ್ನುವುದು ಸೂಕ್ತ. ಈ ದೀಪಸ್ತಂಭದಲ್ಲಿ ಕೆತ್ತಲಾಗಿರುವ ಶಿಲ್ಪಗಳ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ಸ್ತಂಭವನ್ನು ವಿಜಯನಗರದ ಕೊನೆಯ ಕಾಲಘಟ್ಟದಲ್ಲಿ ಅಥವಾ ಕೆಳದಿ (ಇಕ್ಕೇರಿ) ನಾಯಕರ ಪ್ರಥಮ ಕಾಲಘಟ್ಟದಲ್ಲಿ ನಿರ್ಮಾಣ ಮಾಡಿರುವ ಬಗ್ಗೆ ಒಮ್ಮತ ಮೂಡುತ್ತದೆ. ಎಲ್ಲದೆ  ಈ ವಿನಾಯಕ ದೇವರ ಕಂಚಿನ ದೀಪಸ್ತಂಭವು 16ನೇ ಶತಮಾನದ ಪ್ರಥಮ ಕಾಲಘಟ್ಟಕ್ಕೆ ಸೇರಿದ್ದು ಎಂದು ಅಭಿಪ್ರಾಯ ಪಡುತ್ತಾರೆ.

Leave a Reply

Your email address will not be published. Required fields are marked *

error: Content is protected !!