ಎಲ್ಲಾ ಶಾಸಕರು ಏಕಪತ್ನಿ ವ್ರತಸ್ಥರಾ, 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಲಿ: ಡಾ.ಕೆ ಸುಧಾಕರ್
ಬೆಂಗಳೂರು : ಎಲ್ಲರೂ ಏಕಪತ್ನಿ ವ್ರತಸ್ಥರಾ ಹೀಗೆಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಕೇಳಿದ್ದು, 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆ ತನಿಖೆಯಾಗಲಿ ಎಂದು ಕಾಂಗ್ರೆಸ್ ,ಜೆಡಿಎಸ್ ಗೆ ಸವಾಲು ಹಾಕಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ವಿಪಕ್ಷಗಳ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಎಲ್ಲರೂ ಏಕಪತ್ನಿ ವ್ರತಸ್ಥರಾ? 224 ಶಾಸಕರ ವೈಯಕ್ತಿಕ ಜೀವನದ ಬಗ್ಗೆಯೂ ತನಿಖೆಯಾಗಲಿ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸತ್ಯಹರಿಶ್ಚಂದ್ರರು ಎಂದು ಹೇಳಿಕೊಳ್ಳುತ್ತಾರಲ್ಲ, ಯಾರೆಲ್ಲಾ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲಾ ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಲಿ. ರಮೇಶ್ ಕುಮಾರ್, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬಿ.ಮುನಿಯಪ್ಪ ಹಾಗೂ ಕುಮಾರಸ್ವಾಮಿಯವರು ಸತ್ಯಹರಿಶ್ಚಂದ್ರರಲ್ಲವೇ ? ಏಕ ಪತ್ನಿ ವ್ರತಸ್ಥರಾಗಿ ಸಮಾಜಕ್ಕೆ ಮಾದರಿಯಾಗಿದ್ದಾರಲ್ಲವೇ? ಹಾಗಾದರೆ 224 ಶಾಸಕರ ಬಗ್ಗೆಯೂ ತನಿಖೆಯಾಗಲಿ, ಎಲ್ಲರ ಬಂಡವಾಳ ಬಯಲಿಗೆ ಬರಲಿ ಎಂದು ಸವಾಲು ಹಾಕಿದ್ದಾರೆ.
ಇನ್ನು ತಮ್ಮ ಹೇಳಿ ಬಗ್ಗೆ ವಿಶಾದ ವ್ಯಕ್ತ ಪಡಿಸಿರುವ ಅವರು ಈ ಬಗ್ಗೆ ಟ್ವೀಟ್ ಮಾಡಿ ಕೆಲವು ನಾಯಕರು ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ, ಬೇರೆ ಆಯಾಮ ಪಡೆದುಕೊಂಡಿದೆ. ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ. ಹೀಗಾಗಿ ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ನಮ್ಮ ಹದಿನೇಳು ಜನರ ವಿರುದ್ಧ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲಾ ಶಾಸಕರಿಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ ಎಂದು ಬರೆದುಕೊಂಡಿದ್ದಾರೆ.
ಅಲ್ಲದೆ ಮತ್ತೊಂದು ಟ್ವೀಟ್ ನಲ್ಲಿ 6ಜನ ಮಂತ್ರಿಗಳ ವಿರುದ್ಧ ನಿರಂತರ ಶಂಕೆ, ಆರೋಪ ಮಾಡುತ್ತಿರುವಾಗ ಅವರಿಗಾಗಿರಬಹುದಾದ ಅವಮಾನ, ಮಾನಸಿಕ, ಭಾವನಾತ್ಮಕ ನೋವು ಅರಿವಾಗಲಿಲ್ಲ. ಆದರೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವ ನನ್ನ ಹೇಳಿಕೆ ಕೆಲವರಿಗೆ ಬಹಳ ತಪ್ಪಾಗಿ ಕಾಣುತ್ತಿದೆ. ಹಾಗಾಗಿ ನನ್ನ ಹೇಳಿಕೆಯನ್ನು ಶಬ್ದಶಃ ಅರ್ಥೈಸದೆ, ನಮ್ಮ ಸ್ಥಾನದಲ್ಲಿ ನಿಂತು, ಅದರ ಹಿಂದಿರುವ ಆಘಾತ, ವೇದನೆ, ಭಾವನೆಗಳನ್ನು ಅವಲೋಕಿಸಿ, ಅರ್ಥ ಮಾಡಿಕೊಳ್ಳಬೇಕೆಂದು ನಿವೇದನೆ ಮಾಡಿಕೊಳ್ಳುತ್ತೇನೆ ಎಂದು ಬರದುಕೊಂಡಿದ್ದಾರೆ.