ಮಾ.25 ಪೆರ್ಡೂರಿನಿಂದ 80 ಬಡಗಬೆಟ್ಟುವರೆಗೆ ‘ಜನಧ್ವನಿ’ ಪಾದಯಾತ್ರೆ: ಸೊರಕೆ
ಉಡುಪಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋದಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸಲು ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾ.25 ರಂದು ಪೆರ್ಡೂರಿನಿಂದ 80 ಬಡಗಬೆಟ್ಟು ವರೆಗೆ “ಜನಧ್ವನಿ” ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಪಾದಯಾತ್ರೆಯ ಮೂಲಕ ಪಕ್ಷವನ್ನು ಜನರ ಹತ್ತಿರ ಕೊಂಡೊಯ್ಯುದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳ ಅರಿವು ಮೂಡಿಸುವ ಉದ್ದೇಶವನ್ನು ಪಕ್ಷ ಹೊಂದಿರುತ್ತದೆ. ಆದ್ದರಿಂದ ಜನಧ್ವನಿ ಪಾದಯಾತ್ರೆ ಹಮ್ಮಿಕೊಂಡಿದ್ದು ,ಈ ಪಾದಯಾತ್ರೆ ಪೆರ್ಡೂರು ಪೇಟೆಯಿಂದ ಬೆಳಿಗ್ಗೆ 9.30ಕ್ಕೆ ಪ್ರಾರಂಭಗೊಳ್ಳಲಿದೆ. ಈ 16 ಕಿ.ಮೀ. ಉದ್ದದ ಪಾದಯಾತ್ರೆ ಹಿರಿಯಡ್ಕ ಆತ್ರಾಡಿ-ಪರ್ಕಳವಾಗಿ- 80 ಬಡಗಬೆಟ್ಟು ಪಂಚಾಯತ್ ಕಛೇರಿಯ ಎದುರು ಸಾಗಿ ಬಳಿಕ ಸಂಜೆ ಗಂಟೆ 5.00ಕ್ಕೆ ಸಮಾಪನಗೊಳ್ಳಲಿದೆ. ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮತ್ತು ಜಿಲ್ಲಾ ಇನ್ನಿತರ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದರು.
ಈ ಬಗ್ಗೆ ಮಾತು ಮುಂದುವರೆಸಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಂದಿರುವ ರೈತ ವಿರೋಧಿ ನೀತಿಗಳಾದ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಹಾಗೂ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗಳು ಜನವಿರೋಧಿಯಾಗಿದೆ. ಪೆಟ್ರೋಲ್ ಮತ್ತು ಡಿಸೆಲ್ಗಳ ಮೇಲೆ ಸರಕಾರದ ಸೆಸ್ ಹೇರಿಕೆಯಿಂದ ತೈಲಬೆಲೆ ಏರಿಕಗೊಂಡು ಸರಕು ಸಾಗಣೆ ವೆಚ್ಚ ಹೆಚ್ಚಳವಾಗಿ ದಿನ ಬಳಕೆ ವಸ್ತುಗಳ ಬೆಲೆಗಳು ಹಾಗೂ ಸಿಮೆಂಟ್ ಮತ್ತು ಸ್ಟೀಲ್ ಬೆಲೆಗಳು ನಿಯಂತ್ರಣವಿಲ್ಲದಂತೆ ಮುನ್ನುಗ್ಗುತ್ತಿದೆ. ಅಗತ್ಯ ವಸ್ತುಗಳ ಕಾಯ್ದೆಯಿಂದ ಕೆಲವು ವಸ್ತುಗಳನ್ನು ತೆಗೆದು ಹಾಕಲಾಗಿದೆ. ಇದರಲ್ಲಿ ಅಕ್ರಮ ದಾಸ್ತಾನಿನ ಮೇಲೆ ದಾಳಿ ಮಾಡಲು ಅವಕಾಶವಿಲ್ಲದಂತಾಗಿ ಕೃತಕ ಅಭಾವ ಸೃಷ್ಟಿಗೆ ಸರಕಾರವೇ ಪ್ರೇರಣೆ ನೀಡಿದಂತಾಗಿದೆ, ತೈಲ ಬೆಲೆಯನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಬೇಕೆಂಬ ಬೇಡಿಕೆ ಕನಸಾಗಿ ಉಳಿದಿದೆ. ಅದರೊಂದಿಗೆ ಇತ್ತೀಚಿಗೆ ಜಾರಿಗೆ ತಂದ ಗುಜರಿ ವಾಹನ ನೀತಿ ವಾಹನ ಕಂಪೆನಿಗಳಿಗೆ ಲಾಭ ಮಾಡುವ ಉದ್ದೇಶದಿಂದ ಕೂಡಿದೆ. ಅದರ ಪರಿಣಾಮವಾಗಿ ಬಡ ವಾಹನ ಮಾಲೀಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರದ ಜಲ್ಲಿ ಕ್ರಶರ್ ನಿಷೇಧ ಕಾನೂನಿನಿಂದಾಗಿ ಮತ್ತು ಸ್ಥಳೀಯವಾಗಿಮರಳು ನೀತಿಯ ಅಸಮರ್ಪಕ ನಿರ್ವಹಣೆ ಯಿಂದಾಗಿ ಕೂಲಿ ಕಾರ್ಮಿಕರ ಪಾಡು ಕೇಳುವವರಿಲ್ಲದಂತಾಗಿದೆ.
ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಹುಟ್ಟುಹಾಕಿದ ಹಲವಾರು ಸರಕಾರಿ ಸೌಮ್ಯದ ಸಂಸ್ಥೆಗಳನ್ನು ಕೇಂದ್ರ ಸರಕಾರ ಮಾರಾಟ ಮಾಡುತ್ತಿದೆ, ಎಲ್.ಐ.ಸಿ, ರೈಲ್ವೆ, ವಿಮಾನ ನಿಲ್ದಾಣ, ಬೆಮೆಲ್, ಬ್ಯಾಂಕುಗಳು ಹಾಗೂ ನೂರಕ್ಕೂ ಹೆಚ್ಚು ಸರಕಾರಿ ಹಾಗೂ ಅರೆ ಸರಕಾರಿ ಸಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ. ಇದು ಸರಕಾರದ ವೈಫಲ್ಯದ ಪ್ರತೀಕವಾಗಿದೆ. ಇದರಿಂದಾಗಿ ಸಹಸ್ರಾರು ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಏರ್ಪಟ್ಟಿದೆ. ಬರೇ ಬಂಡವಾಳಶಾಹಿಗಳನ್ನು ನೆಚ್ಚಿಕೊಂಡು ಆಡಳಿತ ನಡೆಸುತ್ತಿರುವ ಈ ಸರಕಾರಕ್ಕೆ ಜನರ ಬದುಕಿನ ಬಗ್ಗೆ ಬದ್ಧತೆ ಇಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ವಾಸ್ತವ ಅಲ್ಲದ ಸರಕಾರದ ಸುಳ್ಳಿನ ಹೇಳಿಕೆಗಳಿಂದ ಜನರು ಭ್ರಮಾಲೋಕದಲ್ಲಿ ಸಂಚರಿಸುತ್ತಿದ್ದರು. ಆದರೆ, ಬರಬರುತ್ತಾ ಸರಕಾರದ ಜನ ವಿರೋಧಿ ನಿಲುವುಗಳು ತಮಗೆ ಮಾರಕ ಎಂದು ಜನಸಾಮಾನ್ಯನಿಗೆ ಅರಿವಾಗುತ್ತಿದೆ. 60 ವರ್ಷ ದೇಶದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಕಾಂಗ್ರೆಸ್ ಪಕ್ಷವನ್ನು ಹಿಂದೂ ವಿರೋಧಿ, ದೇಶ ದ್ರೋಹಿಗಳು ಎಂದು ಹೀಗೆಳೆಯುವ ಬಿಜೆಪಿಯ ಮನಸ್ಥಿತಿ ಆ ಪಕ್ಷ ಎತ್ತ ಸಾಗುತ್ತಿದೆ ಎಂಬುದನ್ನು ಬಿಂಬಿಸುತ್ತದೆ. ಇದರ ಬಗ್ಗೆ ಜನಸಾಮಾನ್ಯರಿಗೆ ಎಚ್ಚರ ಮಾಡಿಸುವುದೂ ಪಕ್ಷದ ಕರ್ತವ್ಯವಾಗಿದೆ ಆದ್ದರಿಂದ ಜನಧ್ವನಿ ಪಾದಯಾತ್ರೆ ಕೈಗೊಂಡಿರುವುದಾಗಿ ತಿಳಿಸಿದರು. ಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಹರೀಶ್ ಕಿಣಿ, ಪ್ರವೀಣ್ ಶೆಟ್ಟಿ, ಉದ್ಯಾವರ ನಾಗೇಶ್ ಉಪಸ್ಥಿತರಿದ್ದರು.