ಜಮಾತೆ ಇಸ್ಲಾಮಿ ಹಿಂದ್ ಹೂಡೆ: ಬಡ ದಲಿತ ಕುಟುಂಬಕ್ಕೆ 16 ನೇ ಮನೆ ಹಸ್ತಾಂತರ
ಕೆಮ್ಮಣ್ಣು: ಜಮಾತೆ ಇಸ್ಲಾಮಿ ಹಿಂದ್, ಹೂಡೆ ಘಟಕದ ವತಿಯಿಂದ ಬಡ ದಲಿತ ಕುಟುಂಬಕ್ಕೆ ಮನೆಯನ್ನು ಇಂದು ಹಸ್ತಾಂತರಿಸಲಾಯಿತು. ಸೂರಿಲ್ಲದವರಿಗೆ ಸೂರು ಒದಗಿಸುವ ಮಹತ್ವದ ಕಾರ್ಯದಡಿಯಲ್ಲಿ 16 ನೇ ಮನೆಯನ್ನು ಸಂಘಟನೆ ಮಂಗಳವಾರ ಹಸ್ತಾಂತರಿಸಿತು. ತೋನ್ಸೆ ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯ ಅತೀ ಅಗತ್ಯವುಳ್ಳ ಸೂರಿಲ್ಲದ ಕುಟುಂಬಗಳನ್ನು ಗುರುತಿಸಿ ಸಂಘಟನೆ ಮನೆ ನಿರ್ಮಿಸಿ ಕೊಡುವ ಕಾರ್ಯ ನಡೆಸುತ್ತಾ ಬಂದಿದೆ.
ಮನೆಯ ಕೀಲಿಗೈಯನ್ನು ಹಸ್ತಾಂತರಿಸಿ ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್’ನ ವಲಯ ಸಂಚಾಲಕರಾದ ಅಬ್ದುಸ್ಸಲಾಮ್ ಉಪ್ಪಿನಂಗಡಿ ಮಾತನಾಡಿ, ಈ ಕಾರ್ಯವನ್ನು ನಿಸ್ವಾರ್ಥವಾಗಿ ದೇವ ಸಂಪ್ರೀತಿ ಗಳಿಸಲು ಮಾಡುತ್ತ ಬಂದಿದ್ದೇವೆ. ಕುರಾನಿನ ಮಾರ್ಗದರ್ಶನದಂತೆ ಅನಾಥರಿಗೆ, ಬಡವರಿಗೆ ಸಹಾಯ ಮಾಡುವ ಉದ್ದೇಶ ಮಾತ್ರ ನಾವು ಹೊಂದಿದ್ದೇವೆ. ಇಂತಹ ಒಳಿತಿನ ಕಾರ್ಯಗಳು ವ್ಯಾಪಕವಾಗಲಿ ಎಂದು ಹಾರೈಸಿದರು.
ನಂತರ ಸಾಮಾಜಿಕ ಕಾರ್ಯಕರ್ತ ಶ್ಯಾಮ್’ರಾಜ್ ಬಿರ್ತಿ ಮಾತನಾಡಿ, ಮನೆಯಿಲ್ಲದೆ ಸಂಕಷ್ಟ ಪಡುತ್ತಿರುವ ಲಕ್ಷಾಂತರ ಮಂದಿ ನಮ್ಮ ದೇಶದಲ್ಲಿದ್ದಾರೆ. ಸೂರಿಲ್ಲದೆ ರಸ್ತೆ ಬದಿ ಹಾಕಲಾದ ಕೊಳವೆಗಳಲ್ಲಿ ವಾಸಿಸುವ ಹಲವು ಜನರನ್ನು ಈ ದೇಶದಲ್ಲಿ ಕಾಣಬಹುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಜಾತಿ, ಮತದ ಭೇದವಿಲ್ಲದೆ ಜಮಾತೆ ಇಸ್ಲಾಮಿ ಹಿಂದ್’ನ ವತಿಯಿಂದ ನಡೆಸುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಕಾರ್ಯಗಳು ವ್ಯಾಪಕವಾಗಬೇಕು. ಇಂತಹಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದೇ ನಿಜವಾದ ದೇವರಾಧನೆ ಆಗಿದೆ ಎಂದವರು ಹೇಳಿದರು.
ದಲಿತ ಮುಖಂಡ ಮಂಜುನಾಥ್ ಬಾಳ್ಕುದ್ರು, ತಾಲೂಕು ಪಂಚಾಯತ್ ಸದಸ್ಯೆ ಸುಲೋಚನ ಸತೀಶ್, ಜಮಾತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತೋನ್ಸೆ ಕೆಮ್ಮಣ್ಣು ಗ್ರಾ.ಪಂ ಅಧ್ಯಕ್ಷೆ ಲತಾ, ಸದಸ್ಯರಾದ ವಿಜಯ್, ಸುಝಾನ್ ಡಿಸೋಜಾ, ಮಮ್ತಾಝ್, ಜಮೀಲಾ ಸದಿದಾ, ವತ್ಸಲಾ ವಿನೋದ್, ಡಾ.ಫಹೀಮ್ ಅಬ್ದುಲ್ಲಾ, ಸಂಧ್ಯಾ, ಕುಸುಮ, ಜಮಾತೆ ಇಸ್ಲಾಮಿ ಹಿಂದ್ ಉಡುಪಿ ಜಿಲ್ಲಾಧ್ಯಕ್ಷರಾದ ಶಬ್ಬೀರ್ ಮಲ್ಪೆ ಉಪಸ್ಥಿತರಿದ್ದರು.