ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಏಳು ದಿನ ಕ್ವಾರಂಟೈನ್
ಬೆಂಗಳೂರು: ಕೊರೋನಾ ವೈರಸ್ ನಿಂದ ತತ್ತರಿಸಿ ಹೋಗಿರುವ ದೆಹಲಿ ಮತ್ತು ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವವರನ್ನು ಕಡ್ಡಾಯವಾಗಿ 3 ದಿನ ಸಾಂಸ್ಥಿಕ ಕ್ವಾರಂಟೈನ್, 11 ದಿನ ಹೋಮ್ ಕ್ವಾರಂಟೈನ್ ನಲ್ಲಿರಿಸಲಾಗುತ್ತದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಲಾಕ್ ಡೌನ್ ನಂತರ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ನಡೆಸಿದರು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಪಡೆ ರಚನೆ ಮಾಡಲು ಸೂಚಿಸಲಾಗಿದೆ.
ಅಂತೆಯೇ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಏಳು ದಿನ ಕ್ವಾರಂಟೈನ್ ಮಾಡಲಾಗುವುದು. ಚೆನ್ನೈ, ದೆಹಲಿಯಿಂದ ಬರುವವರಿಗೆ ಮೂರು ದಿನ ಕ್ವಾರಂಟೈನ್ ಮಾಡಲಾಗುವುದು ಎಂದು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಮಾಸ್ಕ್ ಧರಿಸದ ವ್ಯಕ್ತಿಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳದ ವ್ಯಕ್ತಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಹಾಗೂ 200 ರೂ. ದಂಡ ವಿಧಿಸಲಾಗುದು. 8000 ಬೂತ್ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಪತ್ತೆ ಹಚ್ಚುವುದು, ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು, ಹೋಂ ಕ್ವಾರಂಟೈನ್ ಪಾಲನೆಯನ್ನು ಖಾತರಿ ಪಡಿಸುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತೀರ್ಮಾನಿಸಲಾಯಿತು.
ರಾಜ್ಯದಲ್ಲಿ ಒಟ್ಟು 2987 ಸಕ್ರಿಯ ಪ್ರಕರಣಗಳು ಇದ್ದು, ಶೇ.93 ಜನರಿಗೆ ರೋಗ ಲಕ್ಷಣ ಇಲ್ಲ. 200 ಜನರಿಗೆ ಮಾತ್ರ ರೋಗ ಲಕ್ಷಣ ಇದೆ. ರಾಜ್ಯದಲ್ಲಿ ಪರೀಕ್ಷಾ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ 10 ಲಕ್ಷ ಜನಸಂಖ್ಯೆಗೆ 7100 ಪರೀಕ್ಷೆ ನಡೆಸಲಾಗಿದೆ. ಇದು ಐಸಿಎಂಆರ್ ಮಾರ್ಗಸೂಚಿಗಳಿಗಿಂತ ಹೆಚ್ಚಾಗಿದೆ. ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನತೆ ಆತಂಕ ಪಡಬೇಕಾಗಿಲ್ಲ. ಆದರೆ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಮತ್ತು ವೈಯಕ್ತಿಕ ಸ್ವಚ್ಛತೆಯಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಮರೆಯದೆ ತೆಗೆದುಕೊಳ್ಳಬೇಕು ಎಂದು ಸಿಎಂ ಮನವಿ ಮಾಡಿದರು.