ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎಸ್.ಎಲ್.ಕರಣಿಕ್ ಇನ್ನಿಲ್ಲ
ಉಡುಪಿ: ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸುದೀರ್ಘ ಅವಧಿ ಸಸ್ಯಶಾಸ್ತ್ರ ಪ್ರಾಧ್ಯಾಪಕ , ವಿಭಾಗ ಮುಖ್ಯಸ್ಥ ಮತ್ತು ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಸಸ್ಯಶಾಸ್ತ್ರಜ್ಞ ಡಾ. ಎಸ್ ಎಲ್ ಕರಣಿಕ್ (81) ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ .
ಮೂಲತಃ ಕುಂದಾಪುರ ತಾಲೂಕಿನ ಸುಳ್ಸೆಯವರು . ಮೃತರು ಪತ್ನಿ , ಇಬ್ಬರು ಹೆಣ್ಣು ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ .
ನಿವೃತ್ತಿಯ ಬಳಿಕ ಅದಮಾರು ಮಠದ ಪೂರ್ಣಪ್ರಜ್ಞ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿಯಾಗಿಯೂ ಬಹಳ ವರ್ಷ ಸೇವೆ ಸಲ್ಲಿಸಿದ್ದರು. ಸಸ್ಯ ಸಂಕುಲ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಯ ಜಾಗೃತಿ ಅಭಿಯಾನಗಳಲ್ಲಿ ಮಾರ್ಗದರ್ಶನ ನೀಡಿದ್ದರು .
ಶ್ರೀರಾಮಚಂದ್ರಾಪುರ ಮಠದ ವತಿಯಿಂದ ನಡೆದ ಭಾರತೀಯ ಗೋಯಾತ್ರೆ , ವಿಶ್ವಗೋಸಮ್ಮೇಳನ ಹಾಗೂ ಇನ್ನಿತರ ದೇಶಿ ಗೋರಕ್ಷಣೆಯ ಅಭಿಯಾನಗಳಲ್ಲಿ ಅತ್ಯಂತ ಸಕ್ರಿಯರಾಗಿ ಶ್ರಮಿಸಿದ್ದರು . ಹವ್ಯಕ ಸಭಾ ಉಡುಪಿಯ ಅಧ್ಯಕ್ಷ , ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಉಪಾಧ್ಯಕ್ಷ , ಕರಂಬಳ್ಳಿ ವೇಂಕಟರಮಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಮಲ್ಲಂಪಳ್ಳಿ ವಿಷ್ಣುಮೂರ್ತಿ ಕ್ಷೇತ್ರಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ಉಡುಪಿಯ ಪರ್ಯಾಯೋತ್ಸವಗಳಲ್ಲೂ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು .
ಅವರ ನಿಧನಕ್ಕೆ ಅದಮಾರು ಉಭಯ ಶ್ರೀಗಳು , ಪೇಜಾವರ ಶ್ರೀಗಳು , ಶ್ರೀ ರಾಘವೇಶ್ವರ ಸ್ವಾಮೀಜಿ , ಶಾಸಕ ಕೆ ರಘುಪತಿ ಭಟ್ , ಬೈಕಾಡಿ ಸುಪ್ರಸಾದ ಶೆಟ್ಟಿ , ಹವ್ಯಕ ಸಭಾ ಉಡುಪಿ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ ಮೊದಲಾದವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ . ಮೃತರ ಪಾರ್ಥಿವ ಶರೀರವನ್ನು ಇಂದು (ಮಂಗಳವಾರ) ಮುಂಜಾನೆ 11 .30 ಕ್ಕೆ ದೊಡ್ಡಣಗುಡ್ಡೆ ವಿ ಎಮ್ ನಗರದ ಎರಡನೇ ಕ್ರಾಸ್ ನಲ್ಲಿರುವ ಅವರ ಸ್ವಗೃಹಕ್ಕೆ ತರಲಾಗುವುದು . ಅಲ್ಲಿ ಮಧ್ಯಾಹ್ನ ಸುಮಾರು 1 ಘಂಟೆಯ ತನಕ ಅಂತಿಮ ದರ್ಶನಕ್ಕೆ ಅವಕಾಶ ಇದೆ . ಬಳಿಕ ಹುಟ್ಟೂರು ಸುಳ್ಸೆಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.