ಬಂಟ್ವಾಳ: ಪ್ರಸಿದ್ಧ ಬ್ಯಾರಿ ಹಾಡುಗಾರ ಮುಹಮ್ಮದ್ ಶರೀಫ್ ಬಿ.ಸಿ.ರೋಡ್ ಇನ್ನಿಲ್ಲ
ಬಂಟ್ವಾಳ: ಪ್ರಸಿದ್ಧ ಬ್ಯಾರಿ ಹಾಡುಗಾರ ಮುಹಮ್ಮದ್ ಶರೀಫ್ ಬಿ.ಸಿ.ರೋಡ್ ಅವರು ಹೃದಯಾಘಾತದಿಂದ ಸೋಮವಾರ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಬಿ.ಸಿ.ರೋಡ್ ಕೈಕಂಬ ಸಮೀಪದ ನಂದರಬೆಟ್ಟು ನಿವಾಸಿಯಾದ ಅವರು ಬ್ಯಾರಿ ಹಾಡುಗಳಿಗೆ ಪ್ರಸಿದ್ಧಿಯಾಗಿದ್ದರು. 35 ವರ್ಷಗಳಿಂದ ಬ್ಯಾರಿ ಹಾಡುಗಳನ್ನು ಸ್ವಯಂ ರಚಿಸಿ ಹಾಡುತ್ತಿದ್ದರು. ಒಂದು ಕಾಲದಲ್ಲಿ ಮದುವೆ ಮನೆ, ವಿವಿಧ ಸಮಾರಂಭಗಳಲ್ಲಿ ಬ್ಯಾರಿ ಹಾಡುಗಳನ್ನು ಹಾಡುತ್ತಿದ್ದ ಅವರು ಮನೆ ಮಾತಾಗಿದ್ದರು. ಅವರು ಹಾಡಿರುವ ಕೆಲವು ಪ್ರಸಿದ್ಧ ಹಾಡುಗಳು ಇಂದಿಗೂ ಪ್ರಚಲಿತವಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಅವರು ಹಾಡಿರುವ ‘ಇತಿಹಾಸತೆ ಪೆರ್ನಾಳ್’ ಅವರ ಕೊನೆ ಹಾಡಾಗಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅರುವ ಹಾಡಿದ್ದು ಸ್ಥಳೀಯವಾಗಿ ಹಲವು ಪುರಸ್ಕಾರ, ಸನ್ಮಾನಗಳಿಗೆ ಪಾತ್ರರಾಗಿದ್ದಾರೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಇಂದು ಮಧ್ಯಾಹ್ನ ಮನೆಯಲ್ಲಿ ಊಟದ ಬಳಿಕ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆಸ್ಪತ್ರೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಐವರು ಪುತ್ರರು, ಇಬ್ಬರು ಪುತ್ರಿಯರು ಸಹಿತ ಅಪಾರ ಬಂದುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.
Deep condolence for the demise of famous Byaari Singer Muhammed Shareef, BC Road, Bantwala.