ಅಕ್ರಮ ಮರಳು ಸಾಗಾಟ: ಮೂವರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು
ಉಡುಪಿ: ಉಡುಪಿಯ ಸ್ವರ್ಣಾ ನದಿಯಲ್ಲಿ ಹೂಳೆತ್ತುವ ಹೆಸರಿನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಟೆಂಡರ್ದಾರರು ಸಹಿತ ಮೂವರ ವಿರುದ್ಧ ಉಡುಪಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಡುಪಿಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸೋಮವಾರ ಖಾಸಗಿ ದೂರು ದಾಖಲಿಸಿದೆ.
ಸ್ವರ್ಣ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಕುರಿತು ಮೇ 16ರಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪ್ರಕರಣ ದಾಖಲಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಎರಡು ಟಿಪ್ಪರ್, ಎರಡು ಹಿಟಾಚಿ ಮತ್ತು ಒಂದು ಜೆಸಿಬಿ ಸಹಿತ ಮರಳನ್ನು ವಶಪಡಿಸಿಕೊಳ್ಳಲಾಗಿತ್ತು.ಈ ಸಂಬಂಧ ಹೂಳು ತೆಗೆಯಲು ಉಡುಪಿ ನಗರಸಭೆಯಿಂದ ಗುತ್ತಿಗೆ ಪಡೆದಿದ್ದ ಮಂಗಳೂರು ಯೋಜಕ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಟೆಂಡರ್ ದಾರ ವಿನಯ ಕುಮಾರ್ ಮತ್ತು ವಶಪಡಿಸಿಕೊಂಡ ವಾಹನಗಳ ಇಬ್ಬರು ಮಾಲಿಕರ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂ ವಿಜ್ಞಾನಿ ಮಹೇಶ್, ಉಡುಪಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.
ಸ್ವರ್ಣಾ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ. ಇದಕ್ಕೆ ಆಡಳಿತ ಪಕ್ಷದ ನಾಯಕರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಸ್ವರ್ಣಾ ನದಿಯಲ್ಲಿ ಮರಳು ಕಳ್ಳಸಾಗಾಣಿಕೆ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ ವ್ಯಕ್ತಿಗೆ ಬೆದರಿಕೆಯೊಡ್ಡಲಾಗಿದೆ. ಅವರಿಗೆ ತಕ್ಷಣ ಪೊಲೀಸ್ ಭದ್ರತೆಯನ್ನು ಒದಗಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.