ನನ್ನ ಭಾಷಣ ತಿರುಚಿ ಸಮಾಜದ ಒಗ್ಗಟ್ಟು ಮುರಿಯುವ ಕೆಲಸಕ್ಕೆ ಕೈ ಹಾಕಲಾಗಿದೆ ಪೇಜಾವರ ಶ್ರೀ
ಪುತ್ತೂರು: ಬ್ರಾಹ್ಮಣರು ತಮ್ಮ ಮನೆಯ ಹೆಣ್ಮಕ್ಕಳು ಬೇರೆ ಜಾತಿಯವರನ್ನು ಮದುವೆಯಾಗದಂತೆ ನೋಡಿಕೊಳ್ಳಬೇಕು ಎಂದು ನಾನು ಹೇಳಿಲ್ಲ. ಶಿವಮೊಗ್ಗದಲ್ಲಿ ನಾನು ಮಾಡಿದ ಭಾಷಣವನ್ನು ತಿರುಚುವ ಮೂಲಕ ಸಮಾಜದ ಒಗ್ಗಟ್ಟು ಮುರಿಯುವ ಕೆಲಸಕ್ಕೆ ಕೈ ಹಾಕಲಾಗಿದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಭಾನುವಾರ ಪುತ್ತೂರಿನಲ್ಲಿ ನಡೆದ ಹಿಂದೂ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ಹೆಣ್ಮಕ್ಕಳು ಕಣ್ಮರೆಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಅವರು ಎಲ್ಲಿಹೋಗುತ್ತಿದ್ದಾರೆ ಎಂಬುದು ಗಂಭೀರ ವಿಚಾರ.
ಇದನ್ನು ತಡೆಯಲು ಮಾತೃಮಂಡಳಿ ರಚಿಸಬೇಕು ಎಂದು ನಾನು ಶಿವಮೊಗ್ಗದ ಭಾಷಣದಲ್ಲಿ ಹೇಳಿದ್ದೇನೆಯೇ ಹೊರತು, ಬ್ರಾಹ್ಮಣರ ಹೆಣ್ಮಕ್ಕಳನ್ನು ಬೇರೆ ಸಮಾಜದವರಿಗೆ ಮದುವೆ ಮಾಡಿಕೊಡಬಾರದು ಎಂದು ಹೇಳಿಲ್ಲ. ನನ್ನ ಭಾಷಣವನ್ನು ತಿರುಚಲಾಗಿದೆ. ಸಮಾಜ ಒಡೆಯುವ ಯತ್ನವಿದು. ಸಮಾಜ ಒಡೆಯುವವರು ನಾನಾ ರೂಪದಲ್ಲಿ ಬರಬಹುದು. ಇದರ ಬಗ್ಗೆ ಎಚ್ಚರ ಇರಬೇಕು ಎಂದು ಶ್ರೀಗಳು ಹೇಳಿದರು.