ಶಿಲೆ ಕಲ್ಲು ಜಲ್ಲಿಕಲ್ಲು ಸಾಗಾಟ ಪರವಾನಿಗೆ ರದ್ದು- ಕಾರ್ಮಿಕರು ಮತ್ತು ಗ್ರಾಹಕರಿಗೆ ಸಂಕಷ್ಟ

ಉಡುಪಿ: ಕಟ್ಟಡ ಸಾಮಗ್ರಿ ಸಾಗಾಟಕ್ಕೆ ಈ ಹಿಂದಿನಂತೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಟೆಂಪೋ ಮಾಲಕರ ಸಂಘಟನೆ ಒತ್ತಾಯಿಸಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಉಡುಪಿ ಜಿಲ್ಲಾ ಲಾರಿ ಟೆಂಪೋ ಮಾಲಕರ ಸಂಘಟನೆಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ ಅವರು, ದೊಡ್ಡ ದೊಡ್ಡ ಗಣಿಗಾರಿಕೆಗೆ ಇರುವ ಕಾನೂನು, ನಿಯಮಗಳನ್ನು ಇಲ್ಲಿಗೆ ಅಳವಡಿಸಿದ್ದಾರೆ. ಇದರಿಂದ ಎಲ್ಲರಿಗೂ ಸಮಸ್ಯೆ ಉಂಟಾಗಿದೆ. ಮಾ .11  ರಿಂದ ಯಾರಿಗೂ ಹೇಳದೆ ಏಕಾಏಕಿ ಕ್ರಶರ್ ಗಳ ಪರ್ಮಿಟ್ ನ್ನು ಬಂದ್ ಮಾಡಿದ್ದಾರೆ. ಇದರಿಂದ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಲಾರಿ ಮಾಲಕರು, ಚಾಲಕರು, ಕಾರ್ಮಿಕರು, ಕ್ವಾರಿ ಮಾಲೀಕರು, ಕಾರ್ಮಿಕರು ಹಾಗೂ ಗ್ರಾಹಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. 

ಇಲ್ಲಿಂದ ದೂರದ ಕ್ರಶರ್ ಗಳಿಗೆ ಹೋಗಿದ್ದ ನಮಗೆ,  ಕ್ರಶರ್ ಗಳ ಪರ್ಮಿಟ್  ಬಂದ್ ಮಾಡಿರುವ ಕಾರಣ ಮಾಲಿಕರು ವಾಪಾಸ್ಸು ಹೋಗುವಂತೆ ತಿಳಿಸಿದ್ದಾರೆ.ಇದರಿಂದ 2ರಿಂದ 3 ಸಾವಿರ ರೂ ಡೀಸೆಲ್‌ ಹಾಕಿ ದೂರದೂರಿಗೆ ಹೋದವರು ಸಂಕಷ್ಟಕ್ಕೀಡಾಗಿದ್ದಾರೆ. ಈ ರೀತಿ ಆದರೆ ಅಭಿವೃದ್ಧಿ ಆಗುವುದಾದರೂ ಹೇಗೆ. ಅಧಿಕಾರಿಗಳು ಎಲ್ಲೋ ಕುಳಿತು ಕೊಂಡು ಕಾನೂನು ರಚನೆ ಮಾಡುವುದಲ್ಲ. ಬದಲಾಗಿದೆ ಅನಾಹುತ ಎಲ್ಲಿ ಆಗಿದೆ , ಅದಕ್ಕೆ ಕಾರಣ ಯಾರು, ಅವರಿಗೆ ಅನುಮತಿ ಕೊಟ್ಟವರು ಯಾರು, ಆ ಒಂದು ಲೋಡ್ ಜಿಲೆಟಿನ್ ಕಡ್ಡಿ ಎಲ್ಲಿಂದ ಬಂತು, ಅದರ ತಯಾರಿಕಾ ಘಟಕ ಯಾವುದು, ಅದು ಯಾರ ವಾಹನದಲ್ಲಿ ಬಂದಿದೆ, ಬರುವಾಗ ಯಾವುದೇ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ನಡೆಯಲಿಲ್ಲ ವೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ಇಲ್ಲಿ ಒಂದು ಲೋಡು ತೆಗೆದುಕೊಂಡು ಬಂದು ನಮ್ಮ ನೆರೆ ಕರೆಗೆ ಹಾಕುವಾಗ ಹಿಡಿದು 30 ರಿಂದ 40ಸಾವಿರ ರೂ. ದಂಡ ಹಾಕುತ್ತಾರೆ. ಆದರೆ ಅಷ್ಟೊಂದು ಜಿಲೆಟಿನ್ ಸಾಗಾಟ ಮಾಡುವಾಗ ಯಾವುದೇ ತಪಾಸಣೆ ನಡೆದಿಲ್ಲವೇ ಎಂದು ಪ್ರಶ್ನಿಸಿದರು.  

ಇದೇ ವೇಳೆ ಮರಳಿಗೆ ಅನುಮತಿ ನೀಡಿರುವಂತೆ ಜೆಲ್ಲಿ ಕಲ್ಲು, ಪಾದೆ ಕಲ್ಲಿಗೂ ಅನುಮತಿ ನೀಡಿ ಒಂದು ವೇಳೆ ಅನುಮತಿ ನೀಡಿದ ಬಳಿಕವೂ ನಾವು ವಾಹನ ಬಿಟ್ಟು ಬಂದರೆ ನಮ್ಮ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿ ಎಂದ ಅವರು, ಈ ನಿಯಮಗಳು ಕೇವಲ ಕಣ್ಣಿಗೆ ಮಣ್ಣೆರಚಲು ಮಾತ್ರ ರಚಿಸಲಾಗುತ್ತದೆ ಇದರ ಪಾಲನೆ ಈ ವರೆಗೂ ಆಗಿಲ್ಲ ಮುಂದೆಯೂ ಆಗುವುದಿಲ್ಲ ಆದ್ದರಿಂದ ಬಳ್ಳಾರಿ ಗೆ ಅನ್ವಯವಾಗುವ ಕಾನೂನನ್ನು ಉಡುಪಿ ಜಿಲ್ಲೆಗೆ ಅಳವಡಿಸಿದ್ದು ಇಲ್ಲಿನ ಕಾರ್ಮಿಕರಿಗೆ, ಮಾಲಕರಿಗೆ ಸಮಸ್ಯೆ ಉಂಟಾಗಿದೆ ಆದ್ದರಿಂದ ಈ ಕೂಡಲೇ ಸರ್ಕಾರ ಇಲಾಖೆ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ಹಿಂದಿನಂತೆ ಕಟ್ಟಡ ಸಾಮಗ್ರಿ ಸಾಗಾಟಕ್ಕೆ ಮುಕ್ತ ಅವಕಾಶ ಮಾಡಿಕೊಡಬೇಕು.

ಇಲ್ಲವಾದಲ್ಲಿ ಉಡುಪಿ ಜಿಲ್ಲಾ ಲಾರಿ ಟೆಂಪೋ ಮಾಲಕರ ಸಂಘಟನೆ, ಉಡುಪಿ ಜಿಲ್ಲಾ ಕ್ವಾರಿ ಮಾಲಕರ ಸಂಘಟನೆಗಳಿಗೆ ಬೆಂಬಲದ ಮೂಲಕ  ಅತಿ ಶೀಘ್ರದಲ್ಲಿಯೇ ಜಿಲ್ಲೆಯ ಸರ್ವ ಸಂಘಟನೆಗಳನ್ನು ಒಟ್ಟುಗೂಡಿಸಿಕೊಂಡು ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಚಂದ್ರ ಪೂಜಾರಿ, ಹರೀಶ್ ಕೊಟ್ಯಾನ, ಉಮೇಶ್ ಶೆಟ್ಟಿ, ವಿಜಯ್ ಕುಮಾರ್, ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!