ಪೋರ್ಚಗೀಸರ ದಬ್ಬಾಳಿಕೆ ನಡುವೆಯೂ ನೆಲದ ಸಂಸ್ಕೃತಿಯನ್ನು ಕೊಂಕಣಿಗರು ಎತ್ತಿಹಿಡಿದಿದ್ದಾರೆ: ಕೋಟ

ಉಡುಪಿ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ 2 ದಿನಗಳ ಕಾಲ ಆಯೋಜಿಸಿರುವ ಕೊಂಕಣಿ ಸಾಹಿತ್ಯ  ಸಮ್ಮೇಳನಕ್ಕೆ ಮಣಿಪಾಲದ ಆರ್ ಎಸ್ ಬಿ ಸಭಾ ಭವನದಲ್ಲಿ ಚಾಲನೆ ನೀಡಲಾಯಿತು.

ಸಮ್ಮೇಳನವನ್ನು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಂಕಣಿ ಭವನಕ್ಕೆ ಬೇಡಿಕೆಯಂತೆ ರಾಜ್ಯ ಸರ್ಕಾರ ಶೀಘ್ರ 5 ಕೋಟಿ ರೂ, ಅನುದಾನ  ಬಿಡುಗಡೆಗೊಳಿಸಲಿದೆ. ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಈ ಹಿಂದೆ ನೀಡಲಾಗುತ್ತಿದ್ದ ಕನಿಷ್ಠ ಅನುದಾನದಿಂದ 50 ಲಕ್ಷ ರೂ,ಗೆ ಏರಿಸಲಾಗಿದೆ.

ಸಾಹಿತ್ಯ, ಕಲೆ, ಸಂಸ್ಕೃತಿ ಉದ್ಯಮ ಕ್ಷೇತ್ರದಲ್ಲಿ ಕೊಂಕಣಿಗರ ಕೊಡುಗೆ ದೊಡ್ಡದಿದೆ. ಮಣಿಪಾಲ, ಉಡುಪಿ ದೇಶದಲ್ಲೇ ಆರೋಗ್ಯ ಮತ್ತು ಶಿಕ್ಷಣದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರ ಹಿಂದೆ ಕೊಂಕಣಿ ಸಮುದಾಯದ ಹಿರಿಯರ ಪರಿಶ್ರಮವಿದೆ. ದೇಶದಲ್ಲಿ 43 ವರ್ಗದ ಜನರು ಕೊಂಕಣಿ ಭಾಷಿಕರಿದ್ದಾರೆ. ಕಾಶ್ಮಿರದಿಂದ ಕನ್ಯಾಕುಮಾರಿವರೆಗೇ ಕೊಂಕಣಿಗರ ಇತಿಹಾಸ ರೂಪುಗೊಂಡಿದೆ, ಪೋರ್ಚಗೀಸರ ದಬ್ಬಾಳಿಕೆ ನಡುವೆಯೂ ನೆಲದ ಸಂಸ್ಕೃತಿ ಪರಂಪರೆಯನ್ನು ಕೊಂಕಣಿಗರು ಎತ್ತಿಹಿಡಿದಿದ್ದು, ಅದನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ ಎಂದರು. 

ಈ ವೇಳೆ ಸಮ್ಮೇಳನ ಅಧ್ಯಕ್ಷ ಡಾ.ಕಸ್ತೂರಿ ಮೋಹನ ಪೈ ಮಾತನಾಡಿ, ಕೊಂಕಣಿ ಭಾಷೆಗೆ ಒಂದು ಸಾವಿರ ವರ್ಷಗಳ ಇತಿಹಾಸ ವಿದೆ. ಆಗಿನ ಜನರು ದೇವನಗರಿ ಲಿಪಿಯಲ್ಲಿ ಕೊಂಕಣಿ ಭಾಷೆಯನ್ನು ಬರೆದಿದ್ದಾರೆ. ಅದರೆ ಇಂದಿನ ಕೊಂಕಣಿ ಜನರಿಗೆ ಅದು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಕೊಂಕಣಿ ಶಿಕ್ಷಣಕ್ಕೆ ಶಿಕ್ಷಕರು ಸಿಗುತ್ತಾರೆ ಎನ್ನುವ ನಂಬಿಕೆ ಇಲ್ಲ ಎಂದ ಅವರು, ಕೊಂಕಣಿ ಭಾಷೆ ಬರೆಯದೆ, ಕಲಿಯದೇ, ಶಿಕ್ಷಣ ನೀಡದೆ ಅಭಿವೃದ್ಧಿ ಹೊಂದುವುದಿಲ್ಲ ಎಂದರು.

ಕೊಂಕಣಿ ಸಾಹಿತ್ಯ ಸಮ್ಮೇಳನದ ಆರಂಭಕ್ಕೂ ಮುನ್ನ ಅದ್ದೂರಿ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಬರಲಾಯಿತು. ಇನ್ನು ಸಮ್ಮೇಳನದ ಅಂಗವಾಗಿ ಕೊಂಕಣಿಯಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಕಥಾಗೋಷ್ಠಿ, ಶಿಕ್ಷಣ ಗೋಷ್ಠಿ, ಹಾಸ್ಯ ಗೋಷ್ಠಿಗಳು ನಡೆಸಲಾಯಿತು.

ಈ ಸಂದರ್ಭ ಶಾಸಕ ಲಾಲಾಜಿ ಮೆಂಡನ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ತಾ.ಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಡಾ.ಜಗದೀಶ್ ಪೈ, ಸಮ್ಮೇಳನ ಸಮಿತಿ ಗೌರವಧ್ಯಕ್ಷ ಗೋಕುಲ್ ದಾಸ್ ನಾಯಕ್,  ಕಾರ್ಯಾಧ್ಯಕ್ಷ ಮಹೇಶ್ ಠಾಕುರ್, ಪ್ರದಾನ ಕಾರ್ಯದರ್ಶಿ ಅಮೃತ್ ಶೆಣೈ, ಮಣಿಪಾಲ ಲೇಖಕ್‌ನ ಎಸ್.ಸಂಜೀವ್ ಪಾಟಿಲ್, ಆಕಾಡೆಮಿ ಸದಸ್ಯರಾದ ಗುರುಮೂರ್ತಿ ವಿ.ಶೇಟ್, ಗೋಪಾಲಕೃಷ್ಣ ಭಟ್, ನವೀನ ನಾಯಕ್, ಚಿದಾನಂದ ಭಂಡಾರಿ, ಭಾಸ್ಕರ ನಾಯಕ್, ಸುರೇಂದ್ರ ವಿ.ಪಾಲನಕರ, ಪ್ರಮೋದ್ ಶೇಟ್, ಕುಂದಾಪುರ ನಾರಾಯಣ ಖಾರ್ವಿ, ಡಾ.ವಸಂತ ಬಾಂದೇಕರ್, ಅರುಣ್ ಜಿ.ಶೇಟ್, ಕೆನ್ಯೂಟ್ ಜೀವನ್ ಪಿಂಟೋ, ರಿಜಿಸ್ಟ್ರಾರ್ ಮನೋಹರ್ ಕಾಮತ್, ಗೌರವ ಸಲಹೆಗಾರರಾದ ಪ್ರದೀಪ್ ಜಿ.ಪೈ , ನಂದಾಗೋಪಾಲ ಶೆಣೈ, ಸಂಧ್ಯಾ ಪೈ, ಸುರೇಶ್ ನಾಯಕ್, ಪೂರ್ಣಿಮ ಸುರೇಶ್ ನಾಯಕ್, ಸಾಣೂರು ನರಸಿಂಹ ಕಾಮತ್  ಮೊದಲಾದವರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *

error: Content is protected !!