ಭಾವೀ ಸೈನಿಕರು ರಸ್ತೆ ಬದಿ ರಾತ್ರಿ ಕಳೆದರು ಜಿಲ್ಲಾಡಳಿತಕ್ಕೆ ಕಾಣುತ್ತಿಲ್ಲವೇ?:ಕೊಡವೂರು

ಉಡುಪಿ: ಜಿಲ್ಲಾ ಕೇಂದ್ರದ ಅಜ್ಜರಕಾಡಿನಲ್ಲಿ ಕಳೆದ ಎರಡು ದಿನಗಳಿಂದ ಭಾರತೀಯ ಸೇನೆಗೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ನಮ್ಮ ರಾಜ್ಯದ ಸುಮಾರು ಹನ್ನೊಂದು ಜಿಲ್ಲೆಗಳಿಂದ ಸಾವಿರಾರು ಯುವಕರು ಉಡುಪಿ ನಗರಕ್ಕೆ ಬಂದಿಳಿದಿದ್ದಾರೆ. ಹಾಗೆ ಬಂದವರಿಗೆ ಆಯ್ಕೆ ಸಮಿತಿಯು ಯಾವುದೇ ವಸತಿ/ ಊಟ ಸೌಕರ್ಯಗಳನ್ನು ವ್ಯವಸ್ಥೆ ಮಾಡಿದಂತೆ ಕಾಣುತ್ತಿಲ್ಲ. ಬಡ ಕುಟುಂಬಗಳಿಂದ ಬಂದ ಈ ಹುಡುಗರು ಎಲ್ಲೆಲ್ಲೋ ಉಪಹಾರ ಸೇವಿಸಿಕೊಂಡು ರಸ್ತೆಯ ಇಕ್ಕೆಲಗಳಲ್ಲಿ, ಒಳರಸ್ತೆಗಳ ಡಾಂಬರು ನೆಲದ ಮೇಲೆ ಹಗಲಿರುಳು ಮಲಗುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ.

ಪ್ರಯಾಣದ ಖರ್ಚು , ಹಾಗೂ 7 ದಿನಗಳ ಇತರೆ ಖರ್ಚಿಗಾಗಿ ಬಡ್ಡಿಗೆ ಸಾಲ ತಗೊಂಡು ಬಂದೀವಿ ಊರಿಗೆ ಮರಳಿದ ಬಳಿಕ ಕೂಲಿನಾಲಿ ಮಾಡಿ ತೀರಿಸಬೇಕು.” ಅನ್ನೋ ಈ ಹುಡುಗರ ಮಾತು ನಿರುದ್ಯೋಗ ಸಮಸ್ಯೆಗೆ ಕನ್ನಡಿ ಹಿಡಿದಂತಿದೆ. ಸೊಲ್ಲು ಸೊಲ್ಲಿಗೂ ರಾಷ್ಟ್ರ ಪ್ರೇಮದ ಪುಂಗಿ ಊದುವ ಮಂದಿಯೇ ತುಂಬಿರುವ ಈ ನೆಲದಲ್ಲಿ ದೇಶ ರಕ್ಷಣೆ ಮಾಡುವ ಭಾವೀ ಸೈನಿಕರಿಗೆ ಕೊಡುವ ಮರ್ಯಾದೆ ಇದೇನಾ? ಬಡಮಕ್ಕಳಿಗೆ ಅನ್ನ/ವಸತಿಗಳ ಮೂಲಭೂತ ಸೌಕರ್ಯಗಳ ತಾತ್ಕಾಲಿಕ ವ್ಯವಸ್ಥೆಯನ್ನೂ ಮಾಡದೇ ಇರುವ? ಸರ್ಕಾರ ಬಡವಾಗಿದೆಯೇ? ಸೂಕ್ತ ಸಿದ್ದತೆಗಳಿಲ್ಲದೆ ಯಾಕಾದರೂ ಈ ಕ್ಯಾಂಪ್‌ಗಳನ್ನು ಮಾಡಬೇಕು ? ಕೊರೊನಾದ ಎರಡನೇ ಆವೃತ್ತಿಯ ಭೀತಿ ಸುತ್ತೆಲ್ಲ ವ್ಯಾಪಿಸಿರುವಾಗ ಈ ಮಕ್ಕಳು ಗುಂಪು ಗುಂಪಾಗಿ ರಸ್ತೆ ಬದಿಯಲ್ಲಿ ಕೇಳುವವರಿಲ್ಲದೆ ಅಡ್ಡಾಡುತ್ತಿರುವ ದೈನೇಸಿ ಸ್ಥಿತಿ ಜಿಲ್ಲಾಡಳಿತಕ್ಕೆ ನಿಜಕ್ಕೂ ಕಾಣುತ್ತಿಲ್ಲವೇ? ವಾಹನಗಳು ಹಾದುಹೋಗುವ ದಾರಿಯಲ್ಲೇ ಈ ಮಕ್ಕಳು ಮಲಗಿ ನಾಳೆ ಪ್ರಾಣಕ್ಕೆ ಕುತ್ತಾದರೆ ಯಾರು ಹೊಣೆ ? ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!