ಮಣಿಪಾಲ: ವ್ಯಾಪಕವಾಗಿ ಹರಡಿದ ಕೊರೋನಾ ಸೋಂಕು ಎಂಐಟಿ 106 ವಿದ್ಯಾರ್ಥಿಗಳಿಗೆ ಪಾಸಿಟಿವ್

ಉಡುಪಿ, ಮಾ.18: ಮಣಿಪಾಲ ಎಂಐಟಿಯ ಒಟ್ಟು 106 ಮಂದಿ ವಿದ್ಯಾರ್ಥಿಗಳಿಗೆ ಕೋವಿಡ್-19ಕ್ಕೆ ಪಾಸಿಟಿವ್ ಬಂದಿದ್ದು, ಇದೀಗ ಇಡೀ ಕ್ಯಾಂಪಸ್‌ನ್ನು ಕಂಟೈನ್‌ಮೆಂಟ್ ಝೂನ್ ಆಗಿ ಘೋಷಿಸಲಾಗಿದೆ.

ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಇಂದು ಬಿಡುಗಡೆಗೊಳಿಸಿದ ಹೊಸ ಆದೇಶದಲ್ಲಿ ಎಂಐಟಿ ಕ್ಯಾಂಪಸ್ ಕಂಟೈನ್‌ಮೆಂಟ್ ಝೂನ್ ಹಾಗೂ ಬಫರ್ ಜೋನ್‌ನ ವ್ಯಾಪ್ತಿಯನ್ನು ಪ್ರಕಟಿಸಿದ್ದಾರೆ.

ಈ ನಡುವೇ ಕೊವೀಡ್ ನೆಗೆಟಿವ್ ರಿಪೋರ್ಟ್ ಬಂದ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಗುರುವಾರ ತಮ್ಮ ತಮ್ಮ ಊರುಗಳಿಗೆ ತೆರಳಲು ಆಡಳಿತ ಮಂಡಳಿ ಕೊನೆಯ ಅವಕಾಶ ಕಲ್ಪಸಿದ್ದು, ಅದರಂತೆ ಎಂಐಟಿಯ ಗೇಟ್ ನಾಲ್ಕರಲ್ಲಿ ಇಂದು ಮಧ್ಯಾಹ್ನದಿಂದಲೇ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಹೊರಟಿದ್ದರು.

ಇದರಂತೆ ಕಂಟೈನ್‌ಮೆಂಟ್ ಝೂನ್‌ಗೆ ದಕ್ಷಿಣದಲ್ಲಿ ತ್ರಿಶಂಕು ನಗರ, ಉತ್ತರದಲ್ಲಿ ವರ್ಕ್‌ಶಾಪ್ ಲೇನ್, ಪಶ್ಚಿಮದಲ್ಲಿ ಅಲೆವೂರು ರಸ್ತೆ ಹಾಗೂ ಪೂರ್ವದಲ್ಲಿ ವಿವೇಕಾನಂದ ನಗರದ ವ್ಯಾಪ್ತಿ ಇರುತ್ತದೆ.ಇನ್ನು ಬಫರ್ ಝೂನ್‌ಗೆ ದಕ್ಷಿಣದಲ್ಲಿ ದಶರಥ ನಗರ, ಉತ್ತರದಲ್ಲಿ ಎನ್‌ಎಚ್169ಎ, ಪೂರ್ವದಲ್ಲಿ ಈಶ್ವರನಗರ ಮಿಲ್ಕ್ ಡೈರಿ ರೋಡ್ ಹಾಗೂ ಪಶ್ಚಿಮದಲ್ಲಿ ಅನಂತನಗರ ಸೆಕೆಂಡ್ ಸ್ಟೇಜ್ ಪರಿಧಿಯಾಗಿರುತ್ತದೆ.

ಕಂಟೈನ್‌ಮೆಂಟ್ ವಲಯದಲ್ಲಿ 227 ಮನೆಗಳು ಹಾಗೂ 7100 ಜನಸಂಖ್ಯೆ ಇದ್ದರೆ, ಬಫರ್ ಝೂನ್‌ನಲ್ಲಿ 515 ಮನೆಗಳು ಹಾಗೂ 2060 ಜನಸಂಖ್ಯೆ ಇದೆ. ಒಟ್ಟಾರೆಯಾಗಿ 742 ಮನೆಗಳು ಹಾಗೂ 9160 ಮಂದಿ ಈ ವ್ಯಾಪ್ತಿಗೆ ಬರುತ್ತದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ಅದೇ ರೀತಿ ಕಂಟೈನ್‌ಮೆಂಟ್ ವಲಯದಲ್ಲಿ 45 ಅಂಗಡಿಗಳು ಹಾಗೂ ಬಫರ್‌ ವಲಯದಲ್ಲಿ 640 ಅಂಗಡಿ ಮತ್ತು 62 ಕಚೇರಿಗಳಿವೆ. ಒಟ್ಟಾರೆಯಾಗಿ ಈ ವ್ಯಾಪ್ತಿಯಲ್ಲಿ 747 ಶಾಪ್ ಮತ್ತು ಕಚೇರಿಗಳು ಇರುತ್ತವೆ. ಎಂಐಟಿ ಕ್ಯಾಂಪಸ್‌ನ ಕಂಟೈನ್‌ಮೆಂಟ್ ಝೂನ್ ವ್ಯಾಪ್ತಿಯಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕುಂದಾಪುರ ಉಪವಿಭಾಗದ ಎಸಿ ರಾಜು ಕೆ. ಅವರು ಕಮಾಂಡರ್ ಆಗಿದ್ದು, ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಒಳಗೆ ಸಂಚರಿಸಲು ಮಾರ್ಗಸೂಚಿಯಂತೆ ಅವಕಾಶವಿರುತ್ತದೆ.

ಉಪನ್ಯಾಸಕರು ಹಾಗೂ ಎಂಐಟಿ ಸಿಬ್ಬಂದಿಗಳಿಗೆ ಕ್ಯಾಂಪಸ್ ಒಳಗೆ ಬರಲು ಗುರುತು ಚೀಟಿ ಬೇಕಾಗುತ್ತದೆ. ತ್ರಿಶಂಕು ನಗರದ ಒಳಬರುವ ಹಾಗೂ ಹೊರಹೋಗುವ ಗೇಟ್‌ನ್ನು ಡಿನೋಟಿಫಿಕೇಷನ್ ಬರುವವರೆಗೆ ಮುಚ್ಚಲಾಗುತ್ತದೆ.

Leave a Reply

Your email address will not be published. Required fields are marked *

error: Content is protected !!