ಕೋಡಿ ಕಡಲ ತಿರದಲ್ಲಿ ರಕ್ಷಿಸಲ್ಪಟ್ಟಿದ್ದ ಮೊಟ್ಟೆಗಳಿಂದ 120 ಕಡಲಾಮೆ ಮರಿಗಳು

ಕುಂದಾಪುರ: ಕೋಡಿ ಕಡಲ ತಿರದಲ್ಲಿ ಕಳೆದೆರಡು ತಿಂಗಳ ಹಿಂದೆ ರಕ್ಷಿಸಲ್ಪಟ್ಟಿದ್ದ ಮೊಟ್ಟೆಗಳಿಂದ ಮರಿಗಳು ಹೊರ ಬಂದಿದೆ. ಮಾ.17 ರಂದು ರಾತ್ರಿ ಮೊಟ್ಟೆಗಳು ಒಡೆದು ಮರಿ ಹೊರ ಬಂದು ಕಡಲ ಕಿನಾರೆಯಲ್ಲಿ ಪುಟ್ಟ ಪುಟ್ಟ ಆಮೆ ಮರಿಗಳು ಮೊಟ್ಟೆಯಿಂದ ಹೊರ ಬಂದು ಕಡಲನ್ನು ಸೇರುತ್ತಿರುವ ದೃಶ್ಯ ಕಂಡು ಬಂದಿದೆ. ಈ ದೃಶ್ಯ ಕಡಲಾಮೆಗಳ ರಕ್ಷಣೆಗೆ ಮುಂದಾಗಿದ್ದವರ ಕಾರ್ಯಕ್ಕೆ ಸಾರ್ಥಕತೆ ಸಿಕ್ಕಂತಾಗಿತ್ತು.

 ಜನವರಿಯಿಂದ ಮಾರ್ಚ್ ವರೆಗೆ ಕೋಡಿ ಲೈಟ್ ಹೌಸ್ ಬಳಿ ಕಡಲಾಮೆಗಳು ತೀರಕ್ಕೆ ಬಂದು ಮೊಟ್ಟೆಗಳನ್ನಿಟ್ಟಿದ್ದವು. ಈ ಮೊಟ್ಟೆಗಳನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಸಹಿತ , ಇವುಗಳ ರಕ್ಷಣೆಗೆ ಆಸಕ್ತ ಸಂಘ- ಸಂಸ್ಥೆಗಳಿಗೆ ತಿಳಿಸಲಾಯಿತು. ಈ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿನಿಂದ ಕೋಡಿ ಲೈಟ್ ಹೌಸ್ ಕಡಲ ಕಿನಾರೆಯಲ್ಲಿ ಕಡಲಾಮೆಗಳ ಮೊಟ್ಟೆ ಸಂರಕ್ಷಣೆ ಕಾರ್ಯ ನಡೆಯುತ್ತಿತ್ತು. ಅಲ್ಲದೆ ಅಳಿವಿನಂಚಿನಲ್ಲಿರುವ ಕಡಲಾಮೆ ಮೊಟ್ಟೆಗಳನ್ನು ಅಲ್ಲಲ್ಲೇ ನೈಸರ್ಗಿಕವಾಗಿ ಹ್ಯಾಚರಿ ನಿರ್ಮಿಸುವ ಮೂಲಕ ಸಂರಕ್ಷಿಸಲಾಗಿತ್ತು. ಅದರಂತೆ ಮಾ. 17 ರಂದು 2 ಹ್ಯಾಚರಿಗಳಿಂದ ಒಟ್ಟು 120 ಕಡಲಾಮೆ ಮರಿಗಳು ಹೊರಕ್ಕೆ ಬಂದಿದೆ.

ಹೀಗೆ ಮೊಟ್ಟೆಯಿಂದ ಹೊರ ಬಂದ ಕಡಲಾಮೆ ಮರಿಗಳನ್ನು ಸುರಕ್ಷಿತವಾಗಿ ಕಡಲು ಸೇರಿಸುವಲ್ಲಿ ಅಧಿಕಾರಿಗಳು, ಸಂಸ್ಥೆಯವರು, ಸಾರ್ವಜನಿಕರು ಸಹಕರಿಸಿದರು. ಅಲ್ಲದೆ ಈ ಮರಿಗಳ ಸುರಕ್ಷತೆ ಸಲುವಾಗಿ ಸ್ಥಳದಲ್ಲಿ  ಕುಂದಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ ಮಾರ್ಗದರ್ಶನಲ್ಲಿ ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ನೇತೃತ್ವದಲ್ಲಿ ಸಿಬ್ಬಂದಿಗಳು ಹಾಗೂ ಎಫ್.ಎಸ್.ಎಲ್ ಇಂಡಿಯಾ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೀಫ್ ವಾಚ್ ಸಂಸ್ಥೆ ತಡರಾತ್ರಿ 9.30ರಿಂದ ಬೆಳಿಗ್ಗೆ ಜಾವ 4.30ರ ವರೆಗೆ ಬೀಡುಬಿಟ್ಟಿದ್ದರು. ಜ.22ರಿಂದ ಮಾರ್ಚ್ ಮೂರು ತಾರಿಖಿನವರೆಗೂ ಮೊಟ್ಟೆಗಳು ಪತ್ತೆಯಾಗಿತ್ತು.

ಈ ಪೈಕಿ ಜ.24ಕ್ಕೆ ನಿರ್ಮಿಸಿದ ಹ್ಯಾಚರಿಯಲ್ಲಿ 19 ಮರಿಗಳು ಹಾಗೂ ಜ.26ರ ಹ್ಯಾಚರಿಯಿಂದ 101 ಮರಿ ಹೊರಕ್ಕೆ ಬಂದು ಕಡಲು ಸೇರಿದ್ದು ಇನ್ನು ಉಳಿದ ಹ್ಯಾಚರಿಯಿಂದ ಹಂತಹಂತವಾಗಿ ಮೊಟ್ಟೆಯೊಡೆದು ಮರಿಗಳು ಹೊರಬರುವ ನಿರೀಕ್ಷೆಯಲ್ಲಿದ್ದಾರೆ ಇದರ ರಕ್ಷಕರು. ದಡದಲ್ಲಿ ಕಡಲಾಮೆಗಳು ಮೊಟ್ಟೆಯಿಟ್ಟ 48-60 ದಿನದಲ್ಲಿ ಮರಿಗಳು ಹೊರಬರುತ್ತೆ. ಮೊಟ್ಟೆಗಳ ಸಂರಕ್ಷಣೆ, ವೀಕ್ಷಣೆ ಹಾಗೂ ಅಂತಿಮ ಫಲಿತಾಂಶದ ನಿಟ್ಟಿನಲ್ಲಿ ಎರಡು ತಿಂಗಳಿನಿಂದ ಮುತುವರ್ಜಿ ವಹಿಸಿದ್ದು ಮಾತ್ರವಲ್ಲದೇ ಮರಿಯೊಡೆಯುವ ದಿನಾಂಕದ ಸಮೀಪವಾದ ಕಳೆದೊಂದು ವಾರದಿಂದ ರಾತ್ರಿ ಕಾಯುತ್ತಿದ್ದ ಅರಣ್ಯ ಇಲಾಖೆ, ವಿವಿಧ ಸಂಸ್ಥೆ, ಸ್ಥಳೀಯರ ಕಾರ್ಯ ಸಾರ್ವಜನಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.

1 thought on “ಕೋಡಿ ಕಡಲ ತಿರದಲ್ಲಿ ರಕ್ಷಿಸಲ್ಪಟ್ಟಿದ್ದ ಮೊಟ್ಟೆಗಳಿಂದ 120 ಕಡಲಾಮೆ ಮರಿಗಳು

Leave a Reply

Your email address will not be published. Required fields are marked *

error: Content is protected !!