ರಾಸಲೀಲೆ ಸಿಡಿ ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ- ಮಾಜಿ ಪತ್ರಕರ್ತ ನರೇಶ್,ಭವಿತ್ ಹೇಳಿದ್ದೇನು?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಹೆಸರು ಕೇಳಿಬಂದಿರುವುದಕ್ಕೆ ಮಾಜಿ ಪತ್ರಕರ್ತರಾದ ನರೇಶ್ ಗೌಡ ಮತ್ತು ಭವಿತ್ ಎಂಬುವರು ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದಾರೆ. 

ವಿಡಿಯೋದಲ್ಲಿ ಭವಿತ್ ಸಿಡಿ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿರುವುದು ಆಘಾತ ಉಂಟು ಮಾಡಿದೆ. ನಾನು ಪ್ರಕರಣದ ಸೂತ್ರದಾರನೂ ಅಲ್ಲ, ಭಾಗಿಯೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನ್ನ ವಿರುದ್ಧದ ಆರೋಪಗಳು ಸುಳ್ಳು. ಎಸ್ಐಟಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದು ಹೋಗುತ್ತಿದ್ದೇನೆ ಎಂದು ಹೇಳಿದ್ದಾರೆ. 

ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿರುವುದು ನನ್ನ ತೇಜೋವಧೆ ಆಗುತ್ತಿದೆ. ನನ್ನ ತಾಯಿ ಹಾರ್ಟ್ ಪೇಶೆಂಟ್, ನನ್ನ ಮನೆಗೆ ಹೋಗಿ ನೋಡಿ, ನನ್ನ ಪರಿಸ್ಥಿತಿ ನಿಮಗೆ ಅರ್ಥವಾಗುತ್ತದೆ. ಕುಟುಂಬದ ಗೌರವ ಹಾಳು ಮಾಡುವುದು ಎಷ್ಟು ಸರಿ? ಪ್ರಕರಣದಲ್ಲಿ ನನ್ನ ಪಾತ್ರ ಇದ್ದಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. 

ಇನ್ನು ನರೇಶ್ ಗೌಡ ಸಹ ವಿಡಿಯೋ ಮಾಡಿದ್ದು ಅದರಲ್ಲಿ, ನಾನು ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಬಂದರೆ ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಲು ಎಲ್ಲ ಪ್ರಯತ್ನಗಳು ನಡೆದಿರುವುದು ತಿಳಿದಿದೆ. ಈ ಕಾರಣಕ್ಕೆ ನಾನು ಈಗ ಬಂದಿಲ್ಲ. ಕೆಲ ದಿನಗಳ ಒಳಗಡೆ ನಾನೇ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಎಂದು ಗುರುತಿಸಲಾಗಿರುವ ಮಾಜಿ ಪತ್ರಕರ್ತ ನರೇಶ್​ಗೌಡ , ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
 
ಅಜ್ಞಾನ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ಅವರು, ನನಗೆ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ನಾನು ಏಕೆ ತನಿಖಾಧಿಕಾರಿ ಮುಂದೆ ಬಂದಿಲ್ಲ ಅಂದರೆ ಪೊಲೀಸರು ಏನು ಮಾಡುತ್ತಾರೆ ಎನ್ನುವುದು ನನಗೆ ಗೊತ್ತು. ಈ ಕೇಸ್‍ಗೂ ನನಗೂ ಸಂಬಂಧ ಇಲ್ಲ. ಖಾಸಗಿ ಮಾಧ್ಯಮದಲ್ಲಿ ಉದ್ಯೋಗದಲ್ಲಿದ್ದಾಗ ನಾನು ಈ ಹಿಂದೆ ಸಾಕಷ್ಟು ಸ್ಟಿಂಗ್‌ ಆಪರೇಷನ್‌ ಮಾಡಿದ್ದೇನೆ. ನನ್ನ ಬಗ್ಗೆ ಯಾವುದೇ ಆರೋಪ ಬಂದಿರಲಿಲ್ಲ. ಆದರೆ, ಈ ಪ್ರಕರಣದಲ್ಲಿ ಏಕೆ ಬಂದಿದೆ ಎನ್ನುವುದು ಗೊತ್ತಾಗುತ್ತಿಲ್ಲ.

ಪತ್ರಕರ್ತನಾಗಿರುವ ಕಾರಣ ಯುವತಿ ಈ 4-5 ತಿಂಗಳ ಹಿಂದೆ ನನ್ನನ್ನು ಸಂಪರ್ಕಿಸಿ ರಮೇಶ್‌ ಜಾರಕಿಹೊಳಿಯಿಂದ ನನಗೆ ಅನ್ಯಾಯ ಆಗಿದೆ. ನ್ಯಾಯಕೊಡಿಸಬೇಕು ಎಂದು ಕೇಳಿದ್ದರು. ನಾನು ಸಾಕ್ಷ್ಯಗಳು ಇಲ್ಲದೇ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ದಾಖಲೆ, ಫೋಟೋ, ಕ್ಲಿಪ್ಪಿಂಗ್ ಏನಾದರೂ ಇದೆಯಾ ಎಂದು ಕೇಳಿದ್ದೆ. ಈ ನಡುವೆ ನನ್ನ ತಾಯಿಗೆ ತಾಯಿಗೆ ಹುಷಾರಿರಲಿಲ್ಲ, ನನ್ನ ಮಗಳ ನಾಮಕರಣ ಇತ್ತು. ಹೀಗಾಗಿ ಆಕೆಗೆ ನ್ಯಾಯ ಕೊಡಿಸಲು ಆಗಲಿಲ್ಲ. 15-20 ಬಾರಿ ಆ ಹುಡುಗಿ ಜೊತೆ ಮಾತನಾಡಿದ್ದೇನೆ. ನನ್ನ ಮಗಳ ನಾಮಕರಣ ಕೂಡ ಇತ್ತು. ನನ್ನನ್ನು ಕರೆಯಲ್ವಾ ಅಂದಿದ್ದರೂ, ಆ ಹುಡುಗಿ ಕೂಡ ನಾಮಕರಣಕ್ಕೆ ಬಂದರು ಹೋದರು. ಈ ಪ್ರಕರಣದಲ್ಲಿ ನಾನೇ ದೊಡ್ಡ ಸೂತ್ರಧಾರಿ ಅನ್ನೋ ರೀತಿ ಬಿಂಬಿಸೋಕೆ ಆರಂಭ ಮಾಡಿದ್ದಾರೆ. ಇದರಲ್ಲಿ ನನ್ನ ಸಣ್ಣ ಪಾತ್ರವೂ ಇಲ್ಲ.

5 ಕೋಟಿ, 100 ಕೋಟಿ ಆರೋಪಗಳಿಗೆ ಸ್ಪಷ್ಟನೆ ಕೊಡಬೇಕಲ್ಲ ಎಂದು ವಿಡಿಯೋ ಮಾಡಿದ್ದೇನೆ. ನಾನು ಮಾಡಿರುವ 3 ಲಕ್ಷ ಸಾಲ ತೀರಿಸೋಕೆ ಆಗುತ್ತಿಲ್ಲ, ಎರಡೆರಡು ಬಾರಿ ಚೆಕ್ ಬೌನ್ಸ್ ಕೂಡ ಆಗಿದೆ. ಕ್ರೆಡಿಟ್ ಕಾರ್ಡ್ ಇಎಂಐ ಕಟ್ಟಲು ಆಗದೇ ಇಂಟ್ರೆಸ್ಟ್‌ ಕಟ್ಟುತ್ತಿದ್ದೇನೆ. ಶಿರಾ ತಾಲೂಕು ಭುವನಹಳ್ಳಿ ನನ್ನ ಹುಟ್ಟೂರು. ವರ್ಷಕ್ಕೊಂದು ಸರಿ ಮಳೆ ಬಂದರೆ ಸೋರುತ್ತದೆ ನನ್ನ ಮನೆ. 100 ಕೋಟಿ ಆರೋಪ ಮಾಡುತ್ತಿರಲ್ಲ, ತಂದು ಕೊಡಿ, ನಾನೇ ಆರೋಪಿ ಎಂದು ಒಪ್ಪಿಕೊಳ್ಳುತ್ತೇನೆ. ಕಳೆದ 3-4 ತಿಂಗಳ ಹಿಂದೆ ಕೋರಮಂಗಲದಲ್ಲೂ 14 ವರ್ಷದ ಬಾಲಕಿಯ ಮೇಲೆ ನಡೆದಿದ್ದ ಕಿರುಕುಳ ಆರೋಪದ ಸ್ಟೋರಿ ಮಾಡಿದ್ದೆ. 5ರೂ. ನಾನು ತೆಗೆದುಕೊಂಡಿದ್ದು,ತೋರಿಸಿದರೆ ಶಿಕ್ಷೆ ಅನುಭವಿಸೋಕೆ ಸಿದ್ಧ. ಮಗಳ ನಾಮಕರಣಕ್ಕೆ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅವರು ಎಲ್ಲರೂ ಬಂದಿದ್ದರು.

ನಾನು ಏಕೆ ತನಿಖಾಧಿಕಾರಿ ಮುಂದೆ ಬಂದಿಲ್ಲ ಅಂದರೆ, ಏನ್ ಪ್ಲಾನ್ ನಡೆದಿದೆ ಅನ್ನೋದು ನನಗೆ ಗೊತ್ತು. ಅದಕ್ಕೆ ನಾನು ಬಂದಿಲ್ಲ. 8 ದಿನ ಅಥವಾ 5 ದಿನದಲ್ಲಿ ನಾನು ಪೊಲೀಸರ ಮುಂದೆ ಬರುತ್ತೇನೆ. ರಮೇಶ್ ಜಾರಕಿಹೊಳಿ ನಿರಪರಾಧಿ ಎಂದು ಬಿಂಬಿಸಲಾಗುತ್ತಿದೆ. ಹೆಣ್ಣು ಮಗಳನ್ನು ಅಪರಾಧಿ ಥರ ಬಿಂಬಿಸಲಾಗುತ್ತಿದೆ. ಕನ್ನಡಿಗರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ನಾಡ ದ್ರೋಹಿ ರಮೇಶ್ ಜಾರಕಿಹೊಳಿ. ಆ ಹುಡುಗಿ ಪರ ನಿಲ್ಲೋದು ನಮ್ಮ ಧರ್ಮ. ರಮೇಶ್ ಜಾರಕಿಹೊಳಿ ಪ್ರಭಾವ ಎಷ್ಟಿದೆ ಎನ್ನುವುದು ಗೊತ್ತಾಗುತ್ತದೆ. ನಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಷಡ್ಯಂತ್ರ ನಡೆಯುತ್ತಿದೆ.
ಸಿಡಿ ಹೇಗಾಯ್ತು, ಸಿಡಿ ಹೇಗೆ ಆಚೆ ಬಂತು ಅದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ಎಳ್ಳಷ್ಟು ಪಾತ್ರವಿಲ್ಲ. ನಾನು ಸದ್ಯದಲ್ಲೇ ಬರುತ್ತೇನೆ. ನನಗೆ ಏನು ಮಾಹಿತಿ ಇದೆ ಕೊಡುತ್ತೇನೆ. ನಾನು ನಿರ್ದೋಷಿ ಅನ್ನೋದು ತನಿಖೆಯಿಂದ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!