ರಾಜ್ಯದಲ್ಲಿ ಲಾಕ್ಡೌನ್, ರಾತ್ರಿ ಕರ್ಫ್ಯೂ ಇಲ್ಲ: ಸಿಎಂ ಯಡಿಯೂರಪ್ಪ ಅಭಯ
ಬೆಂಗಳೂರು: ಕೊರೋನಾ ವೈರಸ್ ಸೋಂಕು ಹೆಚ್ಚಾಗಿ 2ನೇ ಅಲೆ ಭೀತಿ ಎದುರಾಗಿದ್ದರೂ, ರಾಜ್ಯದಲ್ಲಿ ಸದ್ಯಕ್ಕೆ ಲಾಕ್ಡೌನ್, ರಾತ್ರಿ ಕರ್ಫ್ಯೂ ಜಾರಿ ಮಾಡುವುದಿಲ್ಲ. ಬದಲಾಗಿ ಕೋವಿಡ್ ಸೋಂಕಿತರಿಗಾಗಿ ಹೆಚ್ಚುವರಿ ಹಾಸಿಗೆ, ಐಸಿಯುಗಳನ್ನು ಮೀಸಲಿಡುವುದು ಸೇರಿದಂತೆ ಬೆಂಗಳೂರು ನಗರ, ಬೀದರ್, ಕಲುಬುರಗಿ ಜಿಲ್ಲೆಗಳಲ್ಲಿ ಸೋಂಕಿನ ಪ್ರಕರಣಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ ಕೋವಿಡ್ 19 ಪರಿಸ್ಥಿತಿ ಕುರಿತಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಈ ಸಂದರ್ಭದಲ್ಲಿ ಪ್ರಧಾನಿಯವರು ಭಾರತದಲ್ಲಿ ಲಸಿಕೆ ತಯಾರಿಕೆಗೆ ಲಭ್ಯವಿರುವ ಎಲ್ಲ ಅವಕಾಶಗಳ ಸದುಪಯೋಗಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಿದ್ಧವಿದೆ. ರಾಜ್ಯ ಸರ್ಕಾರಗಳು ಇದರಲ್ಲಿ ಕೈಜೋಡಿಸಬೇಕು. ಎಲ್ಲ ರಾಜ್ಯಗಳಿಗೂ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಒದಗಿಸಲಾಗಿದ್ದು, ಕೊರತೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದರು.
ಲಸಿಕೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದೇ ಹೊರತು ವಾತಾವರಣದಲ್ಲಿನ ವೈರಸ್ ನಿರ್ನಾಮ ಆಗುವುದಿಲ್ಲ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು.
ಕೋವಿಡ್ 19 ಸ್ಥಿತಿಗತಿಯ ಕುರಿತು ಚರ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ನಗರ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳನ್ನು ನಿಯಂತ್ರಿಸಲು ವಿಶೇಷ ಗಮನ ನೀಡುವಂತೆ ಸಲಹೆ ನೀಡಿದ್ದಾರೆ. ಅದರಂತೆ ಕ್ರಮ ವಹಿಸಲಾಗುವುದು.ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ತಿಳಿಸಿದರು. ಈ ಕುರಿತೂ ಕೂಡ ಕ್ರಮ ವಹಿಸಲಾಗುತ್ತಿದೆ. ಎರಡು ಮತ್ತು 3ನೇ ಹಂತದ ನಗರಗಳು ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಿ. ಹಳ್ಳಿಗಳಿಗೆ ಹಬ್ಬದಂತೆ ಎಚ್ಚರ ವಹಿಸಿ. ಸಣ್ಣ ಪಟ್ಟಣಗಳಲ್ಲಿ ರೆಫರಲ್ ವ್ಯವಸ್ಥೆ ಮತ್ತು ಅಂಬ್ಯುಲೆನ್ಸ್ ವ್ಯವಸ್ಥೆಗಳನ್ನು ಬಲಪಡಿಸಲು ಸೂಚಿಸಿದರು. ಲಸಿಕೆಗಳು ವ್ಯರ್ಥವಾಗುವ ಪ್ರಮಾಣ ಕಡಿಮೆಗೊಳಿಸುವಂತೆ ರಾಜ್ಯಗಳಿಗೆ ಸಲಹೆ ನೀಡಿದರು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೋವಿನ್ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡ ರಾಜ್ಯದ 2042 ಆಸ್ಪತ್ರೆಗಳಲ್ಲಿ 1439 ಆಸ್ಪತ್ರೆಗಳು ಇನ್ನೂ ಲಸಿಕೆ ಅಭಿಯಾನ ಪ್ರಾರಂಭಿಸಿಲ್ಲ. ಈ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಇದಲ್ಲದೆ, ಚಿಕಿತ್ಸಾ ನಿರ್ವಹಣೆಯ ಮಾರ್ಗಸೂಚಿಗಳ ಪಾಲನೆ, ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, (ಟೆಸ್ಟ್, ಟ್ರಾಕ್, ಟ್ರೀಟ್) ಮಾದರಿಯನ್ನು ತೀವ್ರಗೊಳಿಸುವಂತೆ ತಿಳಿಸಿದರು. ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ತೀವ್ರಗೊಳಿಸುವಂತೆ ಸೂಚನೆ ನೀಡಲಾಯಿತು.
ಸಭೆಯಲ್ಲಿ ಕರ್ನಾಟಕದ ಪರಿಸ್ಥಿತಿಯ ಕುರಿತು ಈ ಅಂಶಗಳನ್ನು ಪ್ರಧಾನಿಯವರ ಗಮನಕ್ಕೆ ತರಲಾಯಿತು. ರಾಜ್ಯದಲ್ಲಿ ಈ ವರೆಗೆ 9.61 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 12 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 2020ರ ಆಗಸ್ಟ್ ನಿಂದ ಅಕ್ಟೋಬರ್ ವರೆಗೆ ಕೋವಿಡ್ 19 ಸೋಂಕು ತೀವ್ರಗೊಂಡಿತ್ತು. ನವೆಂಬರ್ ನಿಂದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗತೊಡಗಿತು. ಡಿಸೆಂಬರ್ ನಲ್ಲಿ ಇನ್ನೂ ಹೆಚ್ಚಿನ ಇಳಿಕೆಯಾಯಿತು. ಆದರೆ ಕಳೆದ 10 ದಿನಗಳಲ್ಲಿ ಕೋವಿಡ್ 19 ಪ್ರಕರಣಗಳು ಮತ್ತೆ ಏರುಗತಿಯಲ್ಲಿವೆ. ಪಾಸಿಟಿವಿಟಿ ರೇಟ್ ಮಾರ್ಚ್ 15ರಂದು ಶೇ. 1.65ರಷ್ಟು ವರದಿಯಾಗಿದೆ.
ಪ್ರಕರಣಗಳ ಸಂಖ್ಯೆಯು ಬೆಂಗಳೂರು ಹಾಗೂ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಪರೀಕ್ಷಾ ಪ್ರಮಾಣವನ್ನು ಸಹ ಹೆಚ್ಚಿಸಲಾಗಿದೆ. ಮಾರ್ಚ್ 15ರಂದು ತಜ್ಞರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದ್ದು, ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ: ಕೋವಿಡ್ 19 ರ ವಿರುದ್ಧ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳುವುದು.ಮಾಸ್ಕ್ ಧಾರಣೆ ಕಡ್ಡಾಯಗೊಳಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿಯಾಗದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಜನ ಸೇರದಂತೆ ಮುನ್ನೆಚ್ಚರಿಕೆ ವಹಿಸುವುದು ಎಂದು ತಿಳಿಸಿದರು.
ಕೋವಿಡ್ ಸೋಂಕಿತರಿಗಾಗಿ ಹೆಚ್ಚುವರಿ ಹಾಸಿಗೆಗಳು, ಐಸಿಯು ಗಳನ್ನು ಮೀಸಲಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 3 ಕೋವಿಡ್ ಕೇರ್ ಸೆಂಟರ್ ಗಳನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ರಾಜ್ಯದಲ್ಲಿರುವ 3500 ಕ್ಕೂ ಹೆಚ್ಚಿನ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲಾಗುವುದು. ಪ್ರತಿ ದಿನ 3 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಭಾರತ ಸರ್ಕಾರದ ನೀತಿಯಂತೆ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಬೇಕಾಗಿದೆ. ವೃದ್ಧಾಶ್ರಮಗಳಲ್ಲಿ, ಅಪಾರ್ಟ್ ಮೆಂಟ್ ಗಳಲ್ಲಿ ಹಾಗೂ ದುರ್ಗಮ ಪ್ರದೇಶಗಳಲ್ಲಿ ಲಸಿಕೆ ಅಭಿಯಾನ ಕೈಗೊಳ್ಳಲು ಅನುಮತಿ ಕೋರಲಾಯಿತು.
ಇಂತಹ ಸ್ಥಳಗಳಲ್ಲಿ ಲಸಿಕೆ ಕೇಂದ್ರದಲ್ಲಿ ಒದಗಿಸುವ ಎಲ್ಲ ಸೌಲಭ್ಯಗಳು, ಅಂಬ್ಯುಲೆನ್ಸ್ ಹಾಗೂ ಸಾಕಷ್ಟು ಸಂಖ್ಯೆಯ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಪ್ರಧಾನಿಯವರ ಗಮನಕ್ಕೆ ತರಲಾಯಿತು. ರಾಜ್ಯದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದ್ದು, ಪ್ರಧಾನಿಯವರ ಮಾರ್ಗದರ್ಶನದಂತೆ ಕ್ರಮ ವಹಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.