ಮಂಗಳೂರು ವಿ.ವಿಯ ಭ್ರಷ್ಟಾಚಾರ ತನಿಖೆಯ ಸರ್ಕಾರಿ ಆದೇಶ ಅವಗಣನೆ: ಎಬಿವಿಪಿ
ಉಡುಪಿ: ಮಂಗಳೂರು ವಿ.ವಿಯ ಈ ಹಿಂದಿನ ಭ್ರಷ್ಟಾಚಾರಗಳ ತನಿಖೆಯ ಸರ್ಕಾರಿ ಆದೇಶದ ಅವಗಣನೆ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಚ್ಚರಿಕೆ ನೀಡಿದೆ. ವಿಚಾರಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿ ಪರಿಷತ್ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಮನವಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಮಂಗಳೂರು ಘಟಕವು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಹಿಂದೆ ನಡೆದಿರುವ ಹಲವಾರು ಭ್ರಷ್ಟಾಚಾರಗಳ ವಿರುದ್ಧ ನಿರಂತರವಾಗಿ ಹೋರಾಟ ಮತ್ತು ಪ್ರತಿಭಟನೆಗಳನ್ನು ಮಾಡುತ್ತಾ ಬಂದಿದೆ. ವಿದ್ಯಾರ್ಥಿ ಪರಿಷತ್ತಿನ ಹೋರಾಟದ ಫಲವಾಗಿ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ವಿಶ್ವವಿದ್ಯಾಲಯಗಳ ಅಧೀನ ಕಾರ್ಯದರ್ಶಿ ಮಹೇಶ್ ಆರ್ ಅವರು, 2020ರ ಮೇ. 18 ರಂದು ಹೊರಡಿಸಿದ ಪತ್ರಾದೇಶದ ಪ್ರಕಾರ ವಿಶ್ವವಿದ್ಯಾಲಯದಲ್ಲಿ 2012 ಮತ್ತು 2013 ರಲ್ಲಿ ನಡೆದ ಬೋಧಕ ಸಿಬ್ಬಂದಿ ನೇಮಕಾತಿ, ಸೌರ ವಿದ್ಯುತ್ ಮೇಲ್ಚಾವಣಿ ಅಳವಡಿಕೆ, ಸಿಸಿಟಿವಿ ಅಳವಡಿಕೆ, ಪರೀಕ್ಷಾ ಕಾರ್ಯನಿರ್ವಹಣಾ ಗುತ್ತಿಗೆ, ತಾತ್ಕಾಲಿಕ ಸಿಬ್ಬಂದಿ ನೇಮಕಾತಿ, ಗಣಕಯಂತ್ರ ಮತ್ತು ಲ್ಯಾಪ್ ಟಾಪ್ ಖರೀದಿ ಇತರೆ ಎಲ್ಲಾ ವಿಷಯಗಳಲ್ಲಿ ಕೆ.ಟಿ.ಪಿ.ಪಿ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಅಲ್ಲದೆ ಅಂತಾರಾಷ್ಟ್ರೀಯ ವಿದ್ಯಾರ್ಥಿ ವಸತಿ ನಿಲಯ, ಕ್ಲಾಸ್ ರೂಮ್ ಕಾಂಪ್ಲೆಕ್ಸ್ ಹಾಗೂ ಆಡಿಟೋರಿಯಂ ಇಂಟೀರಿಯರ್ ವರ್ಕ್- ಮತ್ತಿತರ ಕಾಮಗಾರಿಗಳನ್ನು ಸರಕಾರದ ಪೂರ್ವಾನುಮತಿ ಇಲ್ಲದೆ ನಡೆಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಸಹ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿವೆ. ಶಿಕ್ಷಣ ಇಲಾಖೆಯು ಮಂಗಳೂರು ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಿಗೆ ಈ ಮೇಲೆ ಉಲ್ಲೇಖಿಸಿದ ಪತ್ರವನ್ನು ಬರೆದು 10 ತಿಂಗಳುಗಳು ಕಳೆದಿವೆ. ಇಲ್ಲಿಯವರೆಗೂ ವಿವಿಯ ಕುಲಪತಿಗಳಾಗಲೀ, ಆಡಳಿತ ಮಂಡಳಿಯಾಗಲಿ ಅಥವಾ ಸಿಂಡಿಕೇಟ್ ಸದಸ್ಯರುಗಳೇ ಆಗಲಿ ಯಾವುದೇ ಗಂಭೀರ ಕ್ರಮವನ್ನು ಕೈಗೊಂಡಂತೆ ಕಾಣಿಸುತ್ತಿಲ್ಲ.
ಕನಿಷ್ಠಪಕ್ಷ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಗ್ರ ತನಿಖಾ ಸಮಿತಿಯನ್ನು ರಚಿಸಲು ಕೂಡ ವಿವಿಗೆ ಪುರುಸೊತ್ತು ಇಲ್ಲದಂತೆ ವರ್ತಿಸುತ್ತಿದೆ. ಕಳೆದ 30 ವರ್ಷಕ್ಕಿಂತಲೂ ಹೆಚ್ಚು ವಿವಿಯ ಆಡಳಿತ ಅನುಭವ ಹೊಂದಿರುವ ಹಾಗೂ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿ ಮಾಡಿರುವ ಸಾಧನೆಯ ಹಿನ್ನೆಲೆಯಿರುವ ಗಣ್ಯಾತಿ ಗಣ್ಯರು ವಿವಿಯ ಆಡಳಿತದ ಚುಕ್ಕಾಣಿಯನ್ನು ಹಿಡಿದಿದ್ದಾರೆ. ಆದರೂ ವಿವಿಯ ಈ ಹಿಂದಿನ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಹಾಗೂ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ಯಾರೂ ಕೂಡ ಸೂಕ್ತ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದೆ.
ವಿದ್ಯಾರ್ಥಿ ಪರಿಷತ್ತಿನ ನೇತೃತ್ವದಲ್ಲಿ ವಿದ್ಯಾರ್ಥಿಗಳು ತಮ್ಮ ಹೋರಾಟ ಮತ್ತು ಪ್ರತಿಭಟನೆ ಮೂಲಕ ವಿ.ವಿಯ ಈ ಹಿಂದಿನ ಉಪಕುಲಪತಿ, ರಿಜಿಸ್ಟ್ರಾರ್ ಮತ್ತಿತರ ಅಧಿಕಾರಿಗಳ ಕರ್ಮಕಾಂಡಗಳನ್ನು ಬಯಲಿಗೆ ತಂದು ಶೈಕ್ಷಣಿಕ ಸಮುದಾಯದ ಗಮನವನ್ನು ಸೆಳೆದಿದ್ದಾರೆ. ಇಷ್ಟೆಲ್ಲ ನಡೆದರೂ ವಿ.ವಿ ಆಡಳಿತ ಮಾತ್ರ ತಮಗೆ ಯಾವುದೇ ಸಂಬಂಧವಿಲ್ಲ ಎಂಬ ರೀತಿಯಲ್ಲಿ ವರ್ತನೆ ಮಾಡುತ್ತಾ ಉದ್ದೇಶಪೂರ್ವಕವಾಗಿ ಮತ್ತು ಅಪರಾಧಿಗಳನ್ನು ರಕ್ಷಿಸುವುದಕ್ಕಾಗಿ ಎಂಬಂತೆ ವಿಳಂಬನೀತಿ ಅನುಸರಿಸುತ್ತಿದೆ. ಆದ್ದರಿಂದ, ವಿದ್ಯಾರ್ಥಿ ಪರಿಷತ್ ಎಚ್ಚರಿಸುವುದೇನೆಂದರೆ, ಸರ್ಕಾರದ ಅಧೀನ ಕಾರ್ಯದರ್ಶಿಗಳ ಪತ್ರದ ಆಧಾರದ ಮೇಲೆ ತಕ್ಷಣವೇ ತನಿಖೆಯನ್ನು ನಡೆಸಬೇಕೆಂದು, ಒಂದು ವೇಳೆ ತನಿಖೆ ಆರಂಭವಾಗಿದೆ ಎಂದು ವಿವಿ ಹೇಳುವುದಾದರೆ, ತನಿಖೆ ಎಲ್ಲಿಯವರೆಗೆ ಬಂದಿದೆ, ತಪ್ಪಿತ್ತಸ್ಥರ ದಂಡನೆಗೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬುದರ ಬಗ್ಗೆ 3 ವಾರಗಳಲ್ಲಿ ಬಹಿರಂಗ ಹೇಳಿಕೆ ನೀಡಬೇಕು ಇಲ್ಲವಾದಲ್ಲಿ ವಿ.ವಿಗೆ ಮುತ್ತಿಗೆ ಹಾಕಿ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸುವುದಾಗಿ ಎಚ್ಚರಿಸುತ್ತದೆ ಎಂದು ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಸಹಕಾರ್ಯದರ್ಶಿ ಮಣಿಕಂಠ ಕಳಸ, ನಗರ ಕಾರ್ಯದರ್ಶಿ ಶ್ರೇಯಸ್ ಶೆಟ್ಟಿ, ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಆಕಾಶ್ ರಾಜ್ , ಉಪಾಧ್ಯಕ್ಷೆ ನಿಧಿ ಶೆಟ್ಟಿ , ಸಾಂಸ್ಕøತಿಕ ಸಹಕಾರ್ಯದರ್ಶಿ ಆಶಿಕ ಉಪಸ್ಥಿತರಿದ್ದರು.