ಪಿಂಚಣಿ ಹಣಕ್ಕಾಗಿ ಅನಾರೋಗ್ಯ ಪೀಡಿತ ತಾಯಿಯನ್ನು ಮಂಚದ ಸಮೇತ ಬ್ಯಾಂಕ್ ಗೆ ಎಳೆದು ತಂದ ಮಗಳು!
ಭುವನೇಶ್ವರ: ಪಿಂಚಣಿ ಹಣಕ್ಕಾಗಿ ಅನಾರೋಗ್ಯ ಪೀಡಿತ ತಾಯಿಯನ್ನು ಮಂಚದ ಸಮೇತ ಬ್ಯಾಂಕ್ ಗೆ ಎಳೆದು ತಂದ ಮಹಿಳೆಯೊಬ್ಬಳ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಈ ವಿಡಿಯೋ ಬ್ಯಾಂಕ್ ಅಧಿಕಾರಿಗಳ ದರ್ಪಕ್ಕೆ ಹಿಡಿದ ಕನ್ನಡಿಯಾಗಿದ್ದು, ಪಿಂಚಣಿ ಹಣ ಪಡೆಯುವುದಕ್ಕಾಗಿ ಹಾಸಿಗೆ ಹಿಡಿದಿರುವ ತಾಯಿಯನ್ನು ಮಂಚದಲ್ಲೇ ವಯಸ್ಸಾದ ಮಹಿಳೆಯೊಬ್ಬರು ಎಳೆದೊಯ್ದಿರುವ ಘಟನೆ ಒಡಿಶಾದಿಂದ ವರದಿಯಾಗಿದೆ. ಒಡಿಶಾ ರಾಜ್ಯದಲ್ಲಿ ನುವಾಪಾದ ಜಿಲ್ಲೆಯ ಬರಗನ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋ ವೈರಲ್ ಆಗಿದೆ. ತನ್ನ 120 ವರ್ಷದ ತಾಯಿಯ ಪಿಂಚಣಿ ಹಣವನ್ನು ಪಡೆಯುವುದಕ್ಕಾಗಿ 70 ವರ್ಷದ ವಯಸ್ಸಾದ ಮಹಿಳೆ ಬ್ಯಾಂಕ್ ಅಧಿಕಾರಿಗಳ ಸಂಪರ್ಕಿಸಿದ್ದರು. ಆದರೆ ಈ ವೇಳೆ ಅಧಿಕಾರಿಗಳು ಪಿಂಚಣಿ ಹಕ್ಕುದಾರ ಮಹಿಳೆ ಖುದ್ಧು ಹಾಜರಾಗದ ಹೊರತು ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಕಂಗಾಲಾದ ಮಹಿಳೆ ಹಾಸಿಗೆ ಹಿಡಿದಿರುವ ತಾಯಿಯನ್ನು ಮಂಚದಲ್ಲೇ ಬ್ಯಾಂಕ್‌ಗೆ ಎಳೆದು ತಂದಿದ್ದಾರೆ. 120 ವರ್ಷದ ಅಜ್ಜಿಯನ್ನು ಲಾಭ್ ಭಾಗೆಲ್ ಎಂದು ಗುರುತಿಸಲಾಗಿದೆ. ತನ್ನ ಪಿಂಚಣಿ ಖಾತೆ (ಜನ್ ಧನ್ ಖಾತೆ)ಯಿಂದ 1500 ರೂ. ತೆಗೆಯಲು 70ರ ವರ್ಷದ ಮಗಳು ಗುಂಜಾ ದೇವಿಗೆ ಹೇಳಿ ಕಳುಹಿಸಲಾಗಿತ್ತು. ಆದರೆ ಪಿಂಚಣಿ ನೀಡಲು ಬ್ಯಾಂಕ್ ಅಧಿಕಾರಿಗಳು ನಿರಾಕರಿಸಿದ್ದರು. ಅಲ್ಲದೆ ಖುದ್ದಾಗಿ ಹಾಜರಾಗುವಂತೆ ಸೂಚಿಸಿದ್ದರು. ಹೀಗಾಗಿ ಒದ್ದಾಡುತ್ತಾ ತಾಯಿಯೊಂದಿಗೆ ಬ್ಯಾಂಕ್ ಪ್ರವೇಶಿಸಿದ ಮಹಿಳೆಗೆ, ಬ್ಯಾಂಕ್ ಅಧಿಕಾರಿಗಳು ಕೊನೆಗೂ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಇಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಜವಾಬ್ದಾರಿಯುತವಾಗಿ ಮೆರೆಯಬೇಕಾಗಿದ್ದ ಬ್ಯಾಂಕ್ ಅಧಿಕಾರಿಗಳ ವರ್ತನೆಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ನುವಾಪಾದ ಶಾಸಕ ರಾಜು ದೊಲ್ಕಿಯಾ, ಈ ಅಮಾನವೀಯ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಈ ಘಟನೆಯನ್ನು ಸರಕಾರವು ತಕ್ಷಣವೇ ತನಿಖೆ ನಡೆಸುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.