ಕಾಪು: ಮಾ.23 ಸುಗ್ಗಿ ಮಾರಿ ಪೂಜೆಯಂದು ಶಿಲಾಸೇವೆ ಸಮರ್ಪಣಾ ಸಮಾರಂಭ
ಕಾಪು: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಶಿಲಾಮಯ ದೇಗುಲ ನಿರ್ಮಾಣದ ಸಲುವಾಗಿ ದೇವಸ್ಥಾನದಲ್ಲಿ ನಡೆಯಲಿರುವ ಶಿಲಾಸೇವೆ ಸಮರ್ಪಣಾ ಸಮಾರಂಭ ಮಾರ್ಚ್ 23 ಸುಗ್ಗಿ ಮಾರಿ ಪೂಜೆಯಂದು ನಡೆಯಲಿದೆ ಎಂದು ದೇಗುಲದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಇಂದು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಮಾರ್ಚ್ ತಿಂಗಳ 23ನೇ ಮಂಗಳವಾರ ಅಮ್ಮನ ಬಹುದೊಡ್ಡ ಜಾತ್ರೆ ಸುಗ್ಗಿ ಮಾರಿಪೂಜೆ ಸಂಭ್ರಮದಲ್ಲಿಯೇ ಬೆಳಿಗ್ಗೆ 9.59ಕ್ಕೆ ಸರಿಯಾಗಿ ಶಿಲಾಸೇವೆ ಸಮರ್ಪಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಕಾಪು ಕ್ಷೇತ್ರದ ಶಾಸಕರಾದ ಲಾಲಾಜಿ. ಆರ್. ಮೆಂಡನ್ ವಹಿಸಿಕೊಳ್ಳಲಿದ್ದಾರೆ. ಹಿಂದುಳಿದ ವರ್ಗದ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್, ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರೂ ಮಾಜಿ ನಗರಾಭಿವೃದ್ಧಿ ಸಚಿವರಾದ ವಿನಯ್ ಕುಮಾರ್ ಸೊರಕೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್, ವಿ.ಕೆ.ಗ್ರೂಪ್ ಕಂಪನಿ ಮುಂಬೈ, ಇದರ ಆಡಳಿತ ನಿರ್ದೇಶಕರಾದ ಕೆ.ಎಮ್. ಶೆಟ್ಟಿ ಇವರೆಲ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ, ಸಮಿತಿಯ ಗೌರವಾಧ್ಯಕ್ಷ ಡಾ. ಬಿ.ಆರ್.ಶೆಟ್ಟಿ ಬಾವುಗುತ್ತು, ಸುಧಾಕರ ಹೆಗ್ಡೆ ತುಂಗಾ, ಸುಂದರ ಶೆಟ್ಟಿ ಸಾಯಿಪ್ಯಾಲೇಸ್, ಪ್ರಕಾಶ್ ಶೆಟ್ಟಿ ಎಮ್.ಆರ್.ಜಿ ಗ್ರೂಪ್, ರಾಜಶೇಖರ ಕೋಟ್ಯಾನ್ ಅಧ್ಯಕ್ಷರು ಬಿಲ್ಲವರ ಮಹಾಮಂಡಲ ಮುಲ್ಕಿ, ಸುಧೀರ್.ವಿ.ಶೆಟ್ಟಿ ಚರೀಷ್ಮಾ ಬಿಲ್ಡರ್ ಮುಂಬೈ, ಅನೀಲ್ ಬಲ್ಲಾಳ್ ಕಾಪು ಬೀಡು. ಇವರು ಮುಖ್ಯ ರಾಮ ಶ್ರೀಯಾನ್, ರಾಘವೇಂದ್ರ ತಂತ್ರಿ ವಿದ್ವಾನ್ ಕೊರಂಗ್ರಪಾಡಿ, ವಿಕ್ರಂ ಅಧ್ಯಕ್ಷರು, ಬಿಲ್ಲವ ಸಂಘ ಕಾಪು, ಡಾ. ಪ್ರಭಾಕರ ಶೆಟ್ಟಿ, ಕಾಪು. ಇವರೆಲ್ಲರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಭಾಗವಹಿಸುವ ಭಕ್ತರೆಲ್ಲರೂ ತಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಬರಬೇಕು. ಸರತಿ-ಸಾಲಿಗಾಗಿ ಉತ್ತಮ ವ್ಯವಸ್ಥೆ ಮಾಡಿದ್ದು, ಎಲ್ಲರೂ ಸಮಾಜಿಕ ಅಂತರ ಕಾಯಬೇಕಾಗಿದೆ. ಸುರಕ್ಷತೆ ನಾಮಫಲಕವನ್ನು ಅಲ್ಲಲ್ಲಿ ಹಾಕಲಾಗಿದ್ದು, ಸಾನಿಟೈಸರನ್ನು ಬೇರೆ-ಬೇರೆ ಜಾಗದಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಮಾತು ಮುಂದುವರೆಸಿದ ಅವರು, ಕಾಪು ಹೊಸ ಮಾರಿಗುಡಿ ದೇವಸ್ಥಾನದ ಸಮಗ್ರ ಶಿಲಾಮಯ ದೇಗುಲದ ಪುನರ್ ನಿರ್ಮಾಣಕ್ಕೆ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯು ಈಗಾಗಲೇ ನೀಲಿನಕಾಶೆ ತಯಾರಿಸಿದೆ. ಲೋಕೋಪಯೋಗಿ ಇಲಾಖೆಯಿಂದ ದೇವಿಯ ಗರ್ಭಗುಡಿ ಮತ್ತು ಉಚ್ಚಂಗಿ ಗುಡಿಯ ಟೆಂಡರ್ ಕರೆದು, ಟೆಂಡರ್ ಪ್ರಕ್ರಿಯೆ ಮುಗಿದ್ದು, ಕಾಮಗಾರಿಯು ಭರದಿಂದ ಸಾಗುತ್ತಿದೆ. ಎರಡು ಗುಡಿಗಳನ್ನು ಬಾಗಲಕೋಟೆ ಜಿಲ್ಲೆಯ ಇಲ್ಕಲ್ನ ಕೆಂಪು ಶಿಲೆಯಿಂದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಮಲ್ಲಾರ್ ಗ್ರಾಮದಲ್ಲಿ ದೇವಸ್ಥಾನದ 4 ಎಕ್ರೆ ಜಾಗದಲ್ಲಿ ಕಲ್ಲಿನ ಕೆಲಸಕ್ಕಾಗಿ ಕಾರ್ಖಾನೆಯನ್ನು ತೆರೆಯಲಾಗಿದೆ ಎಂದರು.
ಇನ್ನು ದೇಗುಲ ಪುನರ್ ನಿರ್ಮಾಣದ ಆರ್ಥಿಕ ಕ್ರೋಡಿಕರಣಕ್ಕಾಗಿ ಭಕ್ತರಿಂದ ಶೀಲಾಸೇವೆಯ ದೇಣಿಗೆಯನ್ನು ಸ್ವೀಕರಿಸಲಾಗುತ್ತಿದ್ದು, ಒಂದು ಶಿಲಾಸೇವೆಗೆ ರೂ.999/-, 9 ಶಿಲಾಸೇವೆಗೆ ರೂ.9999/-, 99 ಶಿಲಾಸೇವೆಗೆ ರೂ.99,999/- ನಿಗದಿಪಡಿಸಲಾಗಿದೆ. ಶಿಲಾಸೇವೆ ನೀಡುವ ಭಕ್ತರು ಸನ್ನಿಧಾನಕ್ಕೆ ಬಂದು ಶಿಲಾಸೇವೆ ನೀಡಿ ರಶೀದಿ ಮತ್ತು ಪ್ರಸಾದ ಪಡೆಯಬಹುದಾಗಿದೆ. ಅಥವಾ ಸಮಿತಿಯ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದು. ಸಮಿತಿಯು ದೇಣಿಗೆ ಸಂಗ್ರಹಣೆಗೆ ಆರ್ಥಿಕ ಸಮಿತಿಯ ಸದಸ್ಯರನ್ನು ಬಿಟ್ಟು ಯಾರನ್ನೂ ಎಲ್ಲಿಯೂ ನೇಮಿಸಿಲ್ಲ. ಹಾಗಾಗಿ ಯಾರು ಮೋಸಹೋಗಬಾರದು. ಪ್ರತಿಯೊಬ್ಬರೂ ತಮ್ಮ ತಮ್ಮ ಹೆಸರಿನಲ್ಲಿ ಕನಿಷ್ಠ 1 ಶಿಲಾಸೇವೆಯನ್ನಾದರೂ ಅಮ್ಮನಿಗೆ ನೀಡಿ ಕೃತಾರ್ಥರಾಗಬೇಕಾಗಿ ವಿನಂತಿಸಿದರು.
ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ದೇಗುಲದ ಪ್ರಧಾನ ಅರ್ಚಕರಾದ ಶ್ರೀನಿವಾಸ ತಂತ್ರಿ, ರಮೇಶ್ ಹೆಗ್ಡೆ ಕಲ್ಯಾ, ಯೋಗಿಶ್ ಶೆಟ್ಟಿ ಕಾಪು, ಬೆಳಪು ದೇವಿಪ್ರಸಾದ್ ಶೆಟ್ಟಿ,ಗಂಗಾಧರ ಸುವರ್ಣ,ಮಾಧವ ಪಾಲನ್ ,ಹರೀಶ್ ನಾಯಕ್ ಕಾಪು,ನಡಿಕೆರೆ ರತ್ನಾಕರ ಶೆಟ್ಟಿ,ಮೊದಲಾದವರು ಉಪಸ್ಥಿತರಿದ್ದರು.