ಕೋವಿಡ್ ಟೆಸ್ಟ್, ಟ್ರ್ಯಾಕ್‌ ತೀವ್ರಗೊಳಿಲು ಪ್ರಧಾನಿ ಸಲಹೆ, ಮತ್ತೆ ಲಾಕ್ ಡೌನ್ ಚಿಂತನೆ ಇಲ್ಲ: ಯಡಿಯೂರಪ್ಪ

ಬೆಂಗಳೂರು: ‘ಬೀದರ್, ಕಲಬುರ್ಗಿ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳನ್ನು ನಿಯಂತ್ರಿಸಲು ವಿಶೇಷ ಗಮನ ನೀಡುವಂತೆ ಮತ್ತು ಮೈಕ್ರೋ ಕಂಟೈನ್ಮೆಂಟ್ ವಲಯಗಳ ಹೆಚ್ಚಳ ಮಾಡುವಂತೆ ಪ್ರಧಾನಿ ಸೂಚಿಸಿದ್ದಾರೆ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಪ್ರಧಾನಿ ಜೊತೆ ಕೋವಿಡ್ ಪರಿಸ್ಥಿತಿ ಕುರಿತಂತೆ ಬುಧವಾರ ನಡೆದ ವಿಡಿಯೊ ಸಂವಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕೋವಿಡ್‌ ಚಿಕಿತ್ಸಾ ನಿರ್ವಹಣೆಯ ಮಾರ್ಗಸೂಚಿಗಳ ಪಾಲನೆ, ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, (ಟೆಸ್ಟ್, ಟ್ರಾಕ್, ಟ್ರೀಟ್) ಮಾದರಿ ತೀವ್ರಗೊಳಿಸುವಂತೆ ಪ್ರಧಾನಿ ತಿಳಿಸಿದ್ದಾರೆ. ಪ್ರಕರಣ ಹೆಚ್ಚಿರುವ ಜಿಲ್ಲೆಗಳಲ್ಲಿ ಪರೀಕ್ಷೆ, ಲಸಿಕೆ ಹೆಚ್ಚಳ ಮಾಡುವಂತೆ ಕೂಡಾ ಸೂಚಿಸಿದ್ದಾರೆ’ ಎಂದರು.

‘ದುರ್ಗಮ ಪ್ರದೇಶಗಳಲ್ಲೂ ಲಸಿಕೆ ಅಭಿಯಾನಕ್ಕೆ ಅನುಮತಿ ಕೇಳಿದ್ದೇವೆ’: ‘ರಾಜ್ಯದ 2,042 ಆಸ್ಪತ್ರೆಗಳು ಕೋವಿಡ್ ಲಸಿಕೆಗೆ ನೊಂದಾಯಿಸಿಕೊಂಡಿವೆ. ಈ ಪೈಕಿ, 1,439 ಆಸ್ಪತ್ರೆಗಳಲ್ಲಿ ಲಸಿಕೆ ಅಭಿಯಾನ ಆರಂಭಿಸಿಲ್ಲ. ಈ ಆಸ್ಪತ್ರೆಗಳಲ್ಲೂ ಲಸಿಕೆ ಹಾಕಲು ಕ್ರಮ ವಹಿಸಲು ಪ್ರಧಾನಿ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದ ನೀತಿಯಂತೆ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಬೇಕಾಗಿದೆ. ವೃದ್ಧಾಶ್ರಮ, ಅಪಾರ್ಟ್‌ಮೆಂಟ್‌, ದುರ್ಗಮ ಪ್ರದೇಶಗಳಲ್ಲೂ ಲಸಿಕೆ ಅಭಿಯಾನಕ್ಕೆ ಅನುಮತಿ ಕೇಳಿದ್ದೇವೆ’ ಎಂದು ತಿಳಿಸಿದರು.

‘ನವೆಂಬರ್, ಡಿಸೆಂಬರ್‌ನಲ್ಲಿ ಕೊರೊನಾ ಇಳಿಕೆಯಾಗಿತ್ತು. ಕಳೆದ ಹತ್ತು ದಿನಗಳಲ್ಲಿ ಹೆಚ್ಚಳವಾಗಿದೆ. ಮಾರ್ಚ್‌ನಿಂದ ಪಾಸಿಟಿವ್ ಪ್ರಮಾಣ ಶೇ 1.65 ಆಗಿದೆ. ಆರ್‌ಟಿಪಿಸಿಆರ್‌ ಟೆಸ್ಟಿಂಗ್ ಪ್ರಮಾಣ ಶೇ 70ಕ್ಕಿಂತ ಹೆಚ್ವಿಸಲು ಮತ್ತು ಲಸಿಕೆ ವ್ಯರ್ಥ ಆಗುವುದನ್ನು ತಡೆಯಲು ಸೂಚಿಸಿದ್ದಾರೆ. ಶೇ 93ರಷ್ಟು ಆರ್‌ಟಿಪಿಸಿಆರ್ ಟೆಸ್ಟಿಂಗ್‌ ಗುರಿ ಸಾಧಿಸಲಾಗಿದೆ. ಇದಕ್ಕೆ ಕೇಂದ್ರ ಗೃಹ ಸಚಿವರಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ’ ಎಂದರು.

‘ರಾಜ್ಯದಲ್ಲಿ ಈವರೆಗೆ 9.61 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, 12 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 2020ರ ಆಗಸ್ಟ್‌ನಿಂದ ಅಕ್ಟೋಬರ್‌ವರೆಗೆ ಕೋವಿಡ್ ಸೋಂಕು ತೀವ್ರಗೊಂಡಿತ್ತು. ನವೆಂಬರ್‌ನಿಂದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗತೊಡಗಿತು. ಡಿಸೆಂಬರ್‌ನಲ್ಲಿ ಇನ್ನೂ ಹೆಚ್ಚಿನ ಇಳಿಕೆಯಾಯಿತು. ಕಳೆದ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರುಗತಿಯಲ್ಲಿವೆ. ಕೋವಿಡ್‌ ಪಾಸಿಟಿವಿಟಿ ಪ್ರಮಾಣ ಮಾರ್ಚ್ 15ರಂದು ಶೇ 1.65ರಷ್ಟು ವರದಿಯಾಗಿದೆ. ಪ್ರಕರಣಗಳ ಸಂಖ್ಯೆಯು ಬೆಂಗಳೂರು ಹಾಗೂ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಹೆಚ್ಚಾಗಿದೆ’ ಎಂದರು.

‘ಪ್ರಕರಣಗಳು ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಪರೀಕ್ಷಾ ಪ್ರಮಾಣ ಸಹ ಹೆಚ್ಚಿಸಲಾಗಿದೆ. ಮಾರ್ಚ್ 15ರಂದು ತಜ್ಞರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಸಭೆಯ ನಿರ್ಣಯದಂತೆ ಕೋವಿಡ್ ವಿರುದ್ಧ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು. ಮಾಸ್ಕ್ ಕಡ್ಡಾಯಗೊಳಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಜನಸಂದಣಿ ಆಗದಂತೆ ಮುನ್ನೆಚ್ಚರಿಕೆ ವಹಿಸುವ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮದುವೆ ಮತ್ತು ಇತರ ಸಮಾರಂಭಗಳಲ್ಲಿ ಮಾರ್ಗಸೂಚಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಜನ ಸೇರದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದೂ ಹೇಳಿದರು.

Leave a Reply

Your email address will not be published. Required fields are marked *

error: Content is protected !!