ಐಸಿವೈಎಂ ಉದ್ಯಾವರ ಸುವರ್ಣ ಸಂಭ್ರಮ: ಮಾ.21 ‘ಭಾಂಗ್ರಾಳೊ ಖೆಳಾ ಉತ್ಸವ್’

ಉಡುಪಿ: ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವ್ಯಾಪ್ತಿಯಲ್ಲಿರುವ ಐಸಿವೈಎಂ ಯುವ ಸಂಘಟನೆಯು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಅಂತರ್ ಚರ್ಚುಗಳ ಕ್ರೀಡಾಕೂಟವನ್ನು ಮಾರ್ಚ್ 21ರಂದು ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲಾ ವಠಾರದಲ್ಲಿ ಹಮ್ಮಿಕೊಳ್ಳಲಾಗಿದೆ. 

ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಂಭ್ರಮದ 49ನೇ ಕಾರ್ಯಕ್ರಮವಾಗಿದ್ದು, ಪುರುಷರಿಗೆ ವಾಲಿಬಾಲ್, ಕಬಡ್ಡಿ, ಹಗ್ಗಜಗ್ಗಾಟ  ಮತ್ತು ಮಹಿಳೆಯರಿಗೆ ಥ್ರೋ ಬಾಲ್ ಹಾಗೂ ಹಗ್ಗಜಗ್ಗಾಟ ಸ್ಪರ್ಧೆಗಳನ್ನು ಆಯೋಜಿಸಿದೆ. ಮಾರ್ಚ್ 21ರ ಆದಿತ್ಯವಾರದಂದು ಬೆಳಿಗ್ಗೆ 8.30 ಕ್ಕೆ ಅದ್ದೂರಿಯ ಸ್ಪರ್ಧೆಗೆ ಚಾಲನೆ ದೊರಕಲಿದೆ ಎಂದು ಪ್ರಕಟಣೆ ತಿಳಿಸಿದೆ.

ಈಗಾಗಲೇ ಹಲವು ದೇವಾಲಯದ ತಂಡಗಳು ತಮ್ಮ ತಂಡದ ಹೆಸರನ್ನು ನೊಂದಾಯಿಸಿಕೊಂಡಿದ್ದು, ಇನ್ನಷ್ಟು ತಂಡಗಳಿಗೆ ನೋಂದಾಯಿಸಲು ಅವಕಾಶವಿದೆಯೆಂದು ಐಸಿವೈಎಂ ಪ್ರಕಟಣೆ ತಿಳಿಸಿದೆ. ಕಥೋಲಿಕ ಕ್ರೈಸ್ತ ಸಮಾಜ ಬಾಂಧವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು, ವಿಜೇತ ತಂಡಗಳಿಗೆ ನಗದು ಬಹುಮಾನ ಮತ್ತು ಶಾಶ್ವತ ಫಲಕ ದೊರಕಲಿದೆ. ಭಾಗವಹಿಸುವ ಮತ್ತು ಆಗಮಿಸುವ ಎಲ್ಲರಿಗೂ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟ ಉಪಚಾರದ ವ್ಯವಸ್ಥೆ ಸಂಘಟನೆಯ ನೇತೃತ್ವದಲ್ಲಿ ನಡೆಸಲು ಯೋಜನೆಗಳನ್ನು ಹಮ್ಮಿಕೊಂಡಿದೆ. 50ಕ್ಕೂ ಅಧಿಕ ದೇವಾಲಯದ 80 ತಂಡಗಳು ಭಾಗವಹಿಸುವ ನಿರೀಕ್ಷೆಯನ್ನು ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ವ್ಯಕ್ತಪಡಿಸಿದೆ. ಇತ್ತೀಚಿಗಷ್ಟೆ ಮುಕ್ತ ಅಂತರ್ ಜಿಲ್ಲಾ ಮಟ್ಟದ ಅದ್ಧೂರಿ ಕ್ರಿಕೆಟ್ ಪಂದ್ಯಾಕೂಟವನ್ನು ಉದ್ಯಾವರದಲ್ಲಿ ಇದೇ ಸಂಘಟನೆ ನಡೆಸಿತ್ತು.

ಐಸಿವೈಎಂ ಉದ್ಯಾವರ ಯುವ ಸಂಘಟನೆಯು ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ತನ್ನ ಸಂಭ್ರಮದ 49ನೇ ಕಾರ್ಯಕ್ರಮವಾಗಿ ಕ್ರೀಡಾಕೂಟ ವನ್ನು ಹಮ್ಮಿಕೊಂಡಿದೆ. 2020 ಜನವರಿಯಲ್ಲಿ ಮಾಜಿ ಕೇಂದ್ರ ಸಚಿವೆ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾರವರು ಉದ್ಘಾಟನೆ ಮಾಡಿರುವ ಸುವರ್ಣ ಮಹೋತ್ಸವ ಸಂಭ್ರಮದಲ್ಲಿ ಒಟ್ಟು 50 ಕಾರ್ಯಕ್ರಮ ನಡೆಸಲು ಯೋಜನೆಯನ್ನು ಹಮ್ಮಿಕೊಂಡಿತ್ತು. ಈಗಾಗಲೇ 48 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. ಏಪ್ರಿಲ್ 24 ಮತ್ತು 25 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.
‘ಉಡುಪಿ ಟೈಮ್ಸ್’ ಮಾಧ್ಯಮವು ಈ ಕ್ರೀಡಾಕೂಟದ ಮಾಧ್ಯಮ ಪ್ರಾಯೋಜಕತ್ವ ವಹಿಸಿದೆ.

Leave a Reply

Your email address will not be published. Required fields are marked *

error: Content is protected !!