ಯುವಜನರನ್ನು ಸೆಳೆಯದೇ ತುಳು ರಂಗಭೂಮಿಗೆ ಉಳಿಗಾಲವಿಲ್ಲ: ಕ್ರಿಸ್ಟೋಫರ್

ಉಡುಪಿ: ಮೊಬೈಲ್ ನಲ್ಲಿ ಕಳೆದು ಹೋಗಿರುವ ಇಂದಿನ ಯುವಜನರನ್ನು, ಅಲ್ಲಿಂದ ಹೊರಗೆ ತಂದು,  ಸಾಂಸ್ಕೃತಿಕ ರಂಗಗಳಲ್ಲಿ ತೊಡಗಿಸದಿದ್ದರೇ, ಯಾವುದೇ ಸಾಂಸ್ಕೃತಿಕ ರಂಗಗಳು ಉಳಿಯುವುದಿಲ್ಲ, ಅದಕ್ಕೆ ತುಳು ರಂಗಭೂಮಿಯೂ ಹೊರತಾಗಿಲ್ಲ ಎಂದು ಮಂಗಳೂರಿನ ಯುವ ರಂಗಕರ್ಮಿ ಕ್ರಿಸ್ಟೋಫರ್ ನಿನಾಸಂ ಆತಂಕ ವ್ಯಕ್ತಪಡಿಸಿದರು.
  ಅವರು ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಉಡುಪಿ ತುಳುಕೂಟದ ವತಿಯಿಂದ ದಿವಂಗತ ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ಕಾರ್ಯಕ್ರಮದಲ್ಲಿ, ತುಳು ರಂಗಭೂಮಿ ನಿನ್ನೆ – ಇಂದು – ನಾಳೆ ಎಂಬ ವಿಚಾರಸಂಕಿರಣದಲ್ಲಿ ತಮ್ಮ ವಿಚಾರಗಳನ್ನು ಮಂಡಿಸುತಿದ್ದರು.

ತುಳು ರಂಗಭೂಮಿಗೆ ತನ್ನದೇ ಆದ ಆಕರ್ಷಣಾ ಶಕ್ತಿ ಇದೆ, ಇದನ್ನು ಸಕರಾತ್ಮಕವಾಗಿ ಬಳಸಿಕೊಂಡು ಯುವಜನತೆಯನ್ನು ತುಳು ರಂಗಭೂಮಿಯತ್ತ ಸೆಳೆಯಬೇಕಾಗಿದೆ, ಅದಕ್ಕೆ ಕಾಲೇಜುಗಳಲ್ಲಿ ಯುವ ರಂಗಭೂಮಿಗಳನ್ನು, ಶಾಲೆಗಳಲ್ಲಿ ಮಕ್ಕಳ ರಂಗಭೂಮಿಯನ್ನು  ಆರಂಭಸಬೇಕು ಎಂದು ಸಲಹೆ ಮಾಡಿದ ಅವರು, ಇದರಿಂದ ಎಲ್ಲಾ ವಿದ್ಯಾರ್ಥಿಗಳು ಕಲಾವಿದರಾಗದೇ ಇದ್ದರೂ, ಉತ್ತಮ ಪ್ರಜ್ಞಾವಂತ ಪ್ರೇಕ್ಷಕರಂತೂ ಆಗುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.

ತುಳು ರಂಗಭೂಮಿ ಇಂದು ಇಂಡಸ್ಟ್ರಿಯಾಗಿ ಬೆಳೆದಿದೆ, ಇದು ಒಳ್ಳೆಯ ಬೆಳವಣಿಗೆ, ಆದರೇ ಅದು ಕೇವಲ ಹಣದಾಸೆಯ ಬ್ಯುಸಿನೆಸ್ ಆಗಬಾರದು ಎಂದು ಎಚ್ಚರಿಸಿದರು.
  ಇನ್ನೊಬ್ಬ ಸಂಪನ್ಮೂಲ ವ್ಯಕ್ತಿ ಹಿರಿಯ ನಾಟಕಕಾರ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು, ನಾವು ಯಾವ ನಾಟಕ ಕೊಟ್ಟರೂ ನೋಡುತ್ತಾರೆ ಎನ್ನುವುದರಕ್ಕೆ ತುಳು ಪ್ರೇಕ್ಷಕರು ಮೂರ್ಖರಲ್ಲ, ಅವರು ಬಹಳ ಬುದ್ದಿವಂತರು, ಒಂದೇ ಬಗೆಯ ನಾಟಕವನ್ನು ಪದೇಪದೇ ನೋಡುವುದಿಲ್ಲ, ಅವರು ಬದಲಾವಣೆ ಬಯಸುತ್ತಾರೆ, ಅದನ್ನರಿತು ನಾಟಕಗಳನ್ನು ಮಾಡಬೇಕು ಎಂದರು.

ಉಡುಪಿಯ ಹಿರಿಯ ನಾಟಕ ಕಲಾವಿದ ಎಂ.ಎಸ್.ಭಟ್ ಮಾತನಾಡಿ, ರಂಗಭೂಮಿಗೆ ಶಿಸ್ತು ಬಹಳ ಅಗತ್ಯ, ಅಲ್ಲಿ ನಿರ್ದೇಶಕನೇ ಪ್ರಧಾನ ಕಲಾವಿದ, ಹಿಂದೆಲ್ಲಾ ತಾವು ನಿರ್ದೇಶಕನ ಕಾಲಿಗೆ ನಮಸ್ಕರಿಸಿ ರಂಗಕ್ಕೆ ಬರುವ ಪದ್ದತಿ ಇತ್ತು, ಆದರೇ ಇಂದು ಆ ಶಿಸ್ತೇ ಇಲ್ಲವಾಗಿದೆ, ಇದರಿಂದ ರಂಗ ಸಂಸ್ಕೃತಿಯೇ ನಾಶವಾಗುತ್ತಿದೆ ಎಂದು ಬೇಸರಿಸಿದರು. ಇದೇ ಸಂದರ್ಭದಲ್ಲಿ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರು ತುಳು ರಂಗಭೂಮಿಗೆ ನೀಡಿರುವ ಕೊಡುಗೆಗಾಗಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಗೌರವಿಸಿದರು. ತುಳುಕೂಟದ ಪದಾಧಿಕಾರಿಗಳಾದ ಗಂಗಾಧರ ಕಿದಿಯೂರು, ಬಿ.ಪ್ರಭಾಕರ ಭಂಡಾರಿ, ಚೈತನ್ಯ ಎಂ.ಜಿ., ತಾರಾ ಉಮೇಶ್ ಆಚಾರ್ಯ, ಯಶೋಧಾ ಕೇಶವ್, ದಯಾನಂದ ಡಿ., ಪ್ರಕಾಶ ಸುವರ್ಣ ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!