ಪೆಟ್ರೋಲ್, ಡೀಸೆಲ್, ಅನಿಲ ಜಿಎಸ್ ಟಿ ವ್ಯಾಪ್ತಿಗೆ: ಸಚಿವೆ ನಿರ್ಮಲಾ ಸದನದಲ್ಲಿ ಹೇಳಿದ್ದೇನು?
ನವದೆಹಲಿ: ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರದೊಂದಿಗೆ ಮಾತನಾಡಿರುವ ನಿರ್ಮಲಾ ಸೀತಾರಾಮನ್, ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್, ಜೆಟ್ ಇಂಧನ (ಎಟಿಎಫ್) ಹಾಗೂ ನೈಸರ್ಗಿಕ ಅನಿಲಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರುವ ಪ್ರಸ್ತಾವನೆ ಈ ವರೆಗೂ ಇಲ್ಲ ಎಂದು ತಿಳಿಸಿದ್ದಾರೆ.
2017 ರಲ್ಲಿ ಜಿಎಸ್ ಟಿ ಜಾರಿಗೆ ತಂದಾಗ, 5 ತೈಲಗಳನ್ನು ಜಿಎಸ್ ಟಿ ವ್ಯಾಪ್ತಿಯಿಂದ ಹೊರಗೆ ಇಟ್ಟು, ರಾಜ್ಯ, ಕೇಂದ್ರ ಸರ್ಕಾರಗಳ ಆದಾಯಕ್ಕೆ ಇವುಗಳಿಂದ ದಾರಿ ಮಾಡಿಕೊಡಲಾಗಿತ್ತು.
ತೈಲವನ್ನು ಜಿಎಸ್ ಟಿ ವ್ಯಾಪ್ತಿಗೆ ತರದೇ ಇರುವುದರಿಂದ ಪೆಟ್ರೋಲ್, ಡೀಸೆಲ್ ಮುಂತಾದವುಗಳ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ವಿಧಿಸಲು ಅವಕಾಶವಿದ್ದರೆ, ವ್ಯಾಟ್ ನ್ನು(ಮೌಲ್ಯ ವರ್ಧಿತ ತೆರಿಗೆ) ವಿಧಿಸುವುದಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶವಿದೆ. ಈ ತೆರಿಗೆಗಳಿಂದಾಗಿ ತೈಲ ದರ ಗಗನಕ್ಕೇರುತ್ತಿದೆ.
ಒಂದೆಡೆ ರಾಜ್ಯ, ಕೇಂದ್ರ ಸರ್ಕಾರಗಳು ಹಾಕುತ್ತಿರುವ ತೆರಿಗಳನ್ನು ಇಳಿಕೆ ಮಾಡುತ್ತಿಲ್ಲ ಮತ್ತೊಂದೆಡೆ, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗುತ್ತಿದೆ. ತತ್ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ದರಗಳು ಸಾರ್ವಕಾಲಿಕ ದಾಖಲೆಯ ಏರಿಕೆ ಕಾಣುತ್ತಿದ್ದು, ಇವುಗಳನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕೆಂಬ ಒತ್ತಾಯ ಹೆಚ್ಚುತ್ತಿದೆ. ತೈಲವನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕೆಂದರೆ ಜಿಎಸ್ ಟಿ ಪರಿಷತ್ ಶಿಫಾರಸು ಕಳಿಸಬೇಕು. ಜಿಎಸ್ ಟಿ ಪರಿಷತ್ ನಲ್ಲಿ ರಾಜ್ಯಸರ್ಕಾರಗಳೂ ಪ್ರತಿನಿಧಿಗಳಾಗಿದ್ದು, ಈ ವರೆಗೂ ಅಂತಹ ಶಿಫಾರಸು ಬಂದಿಲ್ಲ, ಮುಂದೆ ಪ್ರಸ್ತಾವನೆ ಬಂದರೂ ಬರಬಹುದು ಎಂದು ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದ್ದಾರೆ.
ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ಕಳೆದ ವರ್ಷ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 19.98 ರೂಪಾಯಿಗಳಷ್ಟು ಇತ್ತು. ಈ ವರ್ಷ ಅದು 32.9 ರೂಪಾಯಿಗಳಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಅದೇ ರೀತಿ ಕಳೆದ ವರ್ಷ 15.83 ರಷ್ಟಿದ್ದ ಡೀಸೆಲ್ ಮೇಲಿನ ಅಬಕಾರಿ ಸುಂಕ ಈ ವರ್ಷ 31.8 ರಷ್ಟಾಗಿದೆ ಎಂದು ತಿಳಿಸಿದ್ದಾರೆ.