ಎನ್’ಒಸಿಗಾಗಿ ನಗರಾಭಿವೃದ್ಧಿ ಪ್ರಾ.ಇಂಜಿನಿಯರ್ ಲಂಚ ಬೇಡಿಕೆ: ನಾಗರಿಕರ ಅಳಲು

ಉಡುಪಿ(ಉಡುಪಿ ಟೈಮ್ಸ್ ವರದಿ): ಸ್ಥಿರಾಸ್ತಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆಗೆ ನಿರಾಕ್ಷೇಪಣಾ ಪತ್ರ ಕೇಳಿ ಬಂದವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ 2 ಲಕ್ಷ ಲಂಚ ಕೇಳಿದ್ದು ಮಾತ್ರವಲ್ಲದೆ ಕಳೆದ 10 ತಿಂಗಳಿನಿಂದ ಎನ್‍ಒಸಿ ನೀಡದೆ ಸತಾಯಿಸುತ್ತಿದ್ದಾರೆ ಎಂದು 85 ಪ್ರಾಯದ ಹಿರಿಯ ನಾಗರಿಕ ಉದ್ಯಾವರ ಗ್ರಾಮದ ಉಪೇಂದ್ರ ಕಾಮತ್ ತಮ್ಮ ಅಳನ್ನು ತೋಡಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಉಡುಪಿಯ ಉದ್ಯಾವರದ ಸ್ಥಿರಾಸ್ತಿಯ ಪೈಕಿ ಸರ್ವೆ ನಂಬ್ರ: 43/47 ವಿಸ್ತೀರ್ಣ 1.50 ಎಕ್ರೆ ಸ್ಥಿರಾಸ್ತಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಲು ನಿರಾಕ್ಷೇಪಣಾ ಪತ್ರ ಕೋರಿ 2020 ರ ಜ.23 ಅಗತ್ಯ ದಾಖಲಾತಿ ಸಮೇತ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಹಲವಾರು ಬಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಇಂಜಿನಿಯರ್ ಹತ್ತಿರ ಅರ್ಜಿಗೆ ಸಂಬಂಧಪಟ್ಟಂತೆ ವಿಚಾರಿಸಿದಾಗ ಒಂದು ವಾರ ಬಿಟ್ಟು ಬನ್ನಿ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಆ ಬಳಿಕ ಒಂದಲ್ಲ ಒಂದು ಕಾರಣ ನೀಡಿ ಕೆಲಸ ಮುಂದೂಡಿ ಸತಾಯಿಸುತ್ತಿದ್ದಾರೆ ವಿನಹ ಈ ತನಕ ನಿರಾಕ್ಷೇಪಣಾ ಪತ್ರ ನೀಡಿರುವುದಿಲ್ಲ ಎಂದು ಹೆಳಿದ್ದಾರೆ.

ಈ ವಿಚಾರವಾಗಿ ಕಚೇರಿಯಿಂದ ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ಮಾಡಿದ್ದಾರೆ. ಹಾಗೂ ಇತರ ಎಲ್ಲ ಅಗತ್ಯ ದಾಖಲೆಗಳನ್ನು ಸೂಕ್ತ ಸಮಯದಲ್ಲಿ ನೀಡಲಾಗಿದೆ. ಹೀಗಿದ್ದರೂ ಕೂಡಾ, ಉದ್ದೇಶಪೂರಕವಾಗಿ ತನ್ನ ಕೆಲಸ ಮಾಡಿಕೊಡದೇ ಅನಗತ್ಯ ತೊಂದರೆ ನೀಡಲಾಗುತ್ತಿದೆ. ಕಚೇರಿಯ ಸಿಬ್ಬಂದಿ/ಅಧಿಕಾರಿಗಳ ನಿರ್ಲಕ್ಷತನದಿಂದ ಈಗಾಗಲೇ ತಾಲೂಕು ಭೂ ಮಾಪಕರಿಂದ ಪಡೆದ ನಕ್ಷೆಯ ಅವಧಿಯು ಮುಗಿದಿದ್ದು, ಈಗ ಹೊಸ ನಕ್ಷೆಯ ಅವಧಿ ಕೂಡಾ ನವಂಬರ್ ತಿಂಗಳಿಗೆ ಮುಕ್ತಾಯವಾಗುತ್ತಿದೆ. ಅರ್ಜಿ ಸಲ್ಲಿಸಿ ಈಗಾಗಲೇ 10 ತಿಂಗಳು ಕಳೆದಿದೆ. ನಿರಾಕ್ಷೇಪಣಾ ಪತ್ರ ಪಡೆಯಲು 2 ಲಕ್ಷ ನೀಡುವಷ್ಟು ಸಾಮರ್ಥ್ಯ ನನಗಿಲ್ಲ ಆದ್ದರಿಂದ ಆದಷ್ಟುಬೇಗ ನಗರ ಪ್ರಾಧಿಕಾರದಿಂದ ಸ್ಪಂದಿಸಿ ಭೂ ಪರಿವರ್ತನೆಗೆ ನಿರಾಕ್ಷೇಪಣಾ ಪತ್ರ ನೀಡುವಂತೆ ಕೇಳಿಕೊಂಡಿದ್ದಾರೆ.

ಈ ಬಗ್ಗೆ ಇಂಜಿನಿಯರ್ ನನ್ನು ತನಿಖೆಗೆ ಒಳಪಡಿಸಿ ಅವರ ಸಂಬಂಧಿಕರ/ಗೆಳೆಯರ ಚರಾ ಮತ್ತು ಸ್ಥಿರಾಸ್ತಿ ಹಾಗೂ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿ ಅಕ್ರಮ ಹಣಗಳಿಸಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಕೊಡಿಸುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಲ್ಲಿ ಕೇಳಿಕೊಂಡಿದ್ದಾರೆ.  

ನಗರಾಭಿವೃದ್ಧಿ ಪ್ರಾಧಿಕಾರದ ಇಂಜಿನಿಯರ್ ಆಗಿದ್ದ ಸುಬ್ರಹ್ಮಣ್ಯ ಅವರ ಮನೆಗೆ ಇತ್ತೀಚೆಗಷ್ಟೇ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ರಾಜ್ಯದ ವಿವಿಧ ಕಡೆಗಳಲ್ಲಿ ಕೊಟ್ಯಾಂತರ ರೂ. ಮೌಲ್ಯದ ಅವರ  ಅಕ್ರಮ ಆಸ್ತಿ ಪತ್ತೆಯಾಗಿತ್ತು. ಅದೇ ರೀತಿ ಉಡುಪಿಯಲ್ಲಿರುವ ಅಧಿಕಾರಿಗಳು ಕೂಡಾ ಅಕ್ರಮ ಆಸ್ತಿ ಮಾಡಿರುವ ಆರೋಪಗಳು ಕೇಳಿ ಬರುತ್ತಿದೆ. ಕಚೇರಿಗಳಿಗೆ ಜನಸಾಮಾನ್ಯರು ಹೋದರೆ ಕೆಲಸ ಕಾರ್ಯಗಳು ಆಗುತ್ತಿಲ್ಲ. ಕೆಲವೊಮ್ಮೆ ಅಧಿಕಾರಿಗಳು ಇಲ್ಲ ಎಂದು ಹೇಳುವ ಇವರು ಮಗದೊಮ್ಮೆ ಸರ್ವರ್ ಸಮಸ್ಯೆ ನೆಪವೊಡ್ಡಿ ಸತಾಯಿಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ.
 

Leave a Reply

Your email address will not be published. Required fields are marked *

error: Content is protected !!