ಶಂಕರ್ ಶಾಂತಿ ಹಲ್ಲೆಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ- ಆಣೆಪ್ರಮಾಣಕ್ಕೂ ಸಿದ್ದ

ಉಡುಪಿ: (ಉಡುಪಿ ಟೈಮ್ಸ್ ವರದಿ) ಬಾರಕೂರಿನಲ್ಲಿ ಫೆ.20 ರಂದು ನಡೆದ ಆರ್‍ಟಿಐ ಕಾರ್ಯಕರ್ತ ಶಂಕರ್ ಶಾಂತಿ ಅವರ ಮೇಲಿನ ಹಲ್ಲೆಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಶಂಕರ್ ಶಾಂತಿ ಅವರ ಸಹೋದರ ವಿಜಯ್ ಪೂಜಾರಿ ಹೇಳಿದ್ದಾರೆ.

ಈ ಬಗ್ಗೆ ಉಡುಪಿಯಲ್ಲಿ ಇಂದು ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಈ ಪ್ರಕರಣದಲ್ಲಿ ಬಾರಕೂರಿನ ಹಳ್ಳಿ ಗ್ರಾಮದಲ್ಲಿರುವ ಸುಮಾರು 3 ಎಕರೆ ಜಾಗಕ್ಕೆ ಸಂಬಂಧಿಸಿ ಶಂಕರ್ ಶಾಂತಿ ಹಾಗೂ ನಮ್ಮ ನಡುವೆ ಕೌಟುಂಬಿಕ ವೈಮನಸ್ಸು ಇದ್ದು, ಆಸ್ತಿ ವಿಷಯದಲ್ಲಿ ಕುಂದಾಪುರ ಸಿವಿಲ್ ನ್ಯಾಯಲಯದಲ್ಲಿ ವ್ಯಾಜ್ಯ ಬಾಕಿ ಇದೆ. ಆದರೆ, ಶಂಕರ್ ಶಾಂತಿ ಅವರ ಮೇಲಿನ ಹಲ್ಲೆಗೂ ನಮ್ಮ ಕುಟುಂಬಕ್ಕೂ ಯಾವುದೇ ರೀತಿಯ ಸಂಬಂಧ ವಿಲ್ಲ.

ಶಂಕರ ಶಾಂತಿಯವರ ಮೇಲೆ ನಡೆದಿರುವಂತಹ ಹಲ್ಲೆ ಖಂಡನೀಯ. ಈ ವಿಚಾರದಲ್ಲಿ ನಿಜವಾದಂತಹ ಆರೋಪಿಗಳಿಗೆ ಶಿಕ್ಷೆಯಾಗುವಂತಾಗಬೇಕು. ಆದರೆ, ಈ ಹಲ್ಲೆಗೆ ಸಂಬಂದಿಸಿ ಪ್ರಕರಣದಲ್ಲಿ ಸಹೋದರರಾದ ಸುರೇಶ ಪೂಜಾರಿ, ವಿಜಯ ಪೂಜಾರಿ, ಸರ್ವೋತ್ತಮ ಪೂಜಾರಿ ಹಾಗೂ ಅಜಿತ್ ಪೂಜಾರಿಯುವರ ಹೆಸರು ಸೇರಿಸಿರುವುದು ದುರುದ್ದೇಷದಿಂದ ಕೂಡಿರುತ್ತದೆ.

ನಾವು ನಿರಪರಾಧಿಗಳು, ಈ ಪ್ರಕರದಲ್ಲಿ ನಾವು ಭಾಗಿಯಾಗಿಲ್ಲ ಎಂಬುದಕ್ಕೆ ನಮ್ಮಲ್ಲಿ ಸಾಕ್ಷದಾರಗಳಿವೆ, ಅವುಗಳನ್ನು ಹಾಜರು ಪಡಿಸುತ್ತೇವೆ ಎಂದರು. ಅಲ್ಲದೆ ಈ ಪ್ರಕರಣದಲ್ಲಿ ತಾವು ನಿರಪರಾಧಿಗಳಂದು ಸಾಬೀತು ಪಡಿಸಲು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ, ಶಂಕರನಾರಾಯಣ ಕಲ್ಕುಡ ದೇವರಲ್ಲಿ ಪ್ರಮಾಣ ಮಾಡಲು ಬದ್ದರಿದ್ದೇವೆ ಎಂದರು.

ಈ ಬಗ್ಗೆ ಮಾತು ಮುಂದುವರೆಸಿದ ಅವರು, ಫೆ.26 ರಂದು ಸಂಜೆ ಬನ್ನಂಜೆ ನಾರಾಯಣಗುರು ಸಭಾಂಗಣದಲ್ಲಿ ಬಿಲ್ಲವ ಯುವವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಎಂ.ಪೂಜಾರಿ ಅವರು, ಕರೆದ ಸ್ವಾಭಿಮಾನಿ ಬಿಲ್ಲವರ ಸಭೆಯಲ್ಲಿ ಇವರು ಹಾಜರಿದ್ದು, ಈ ಕಾರಣದಿಂದ ಈ ಪ್ರಕರಣ ದಾಖಲಿಸಿದ್ದಾರೆಯೇ ಎಂದು ಶಂಕೆ ವ್ಯಕ್ತವಾಗಿದೆ ಎಂದ ಅವರು, ಈ ಪ್ರಕರಣದಲ್ಲಿ ನಿರಪರಾಧಿಗಳಾದ ನಮ್ಮ ಹೆಸರು ಬಂದಿರುವ ಬಗ್ಗೆ ಬಿಲ್ಲವ ಯುವ ಸಂಘಟನೆಯ ಅಧ್ಯಕ್ಷರಾದ ಪ್ರವೀಣ್ ಎಂ. ಪೂಜಾರಿಯವರ ಗಮನಕ್ಕೆ ತಂದಿದ್ದು, ಅವರು, ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ತಿಳಿಸಿದರು.

ಇದೇ ವೇಳೆ ಪ್ರಕರಣಕ್ಕೆ ಸಂಬಂದಿಸಿ ಮುಂದಿನ ದಿನಗಳಲ್ಲಿ ಪೊಲೀಸರು ನಿಷ್ಪಕ್ಷಪಾತವಾದ ತನಿಖೆ ನಡೆಸಿ ಕ್ರಮ ಕೈಗೊಂಡು ನಿರಪರಾದಿಗಳಾದ ತಮಗೆ ನ್ಯಾಯ ಸಿಗಬೇಕು ಎಂದು ಕೇಳಿಕೊಂಡರು. ಈ ಸಂದರ್ಭ ಪತ್ರಿಕಾಗೋಷ್ಟಿಯಲ್ಲಿ ಬ್ರಹ್ಮಾವರದ ಹಂದಾಡಿಯ ಸರ್ವೋತ್ತಮ ಪೂಜಾರಿ, ಅಜಿತ್ ಪೂಜಾರಿ, ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!