ನಗರಸಭೆಯ ತುರ್ತು ಕೌನ್ಸಿಲ್ ಸಭೆ: ಆಸ್ಮಾ ಎಲೆಕ್ಟ್ರಾನಿಕ್ಸ್ ಪರವಾನಿಗೆ ರದ್ದು, ಅಂಗಡಿಗೆ ಬೀಗ ಜಡಿಯುವ ನಿರ್ಣಯ

ಉಡುಪಿ : ಶುಕ್ರವಾರ ನಗರದ ನಡು ಬೀದಿಯಲ್ಲಿ ಕಸ ಸಂಗ್ರಹಿಸುತ್ತಿದ್ದ ಪೌರಕಾರ್ಮಿಕನಿಗೆ ಹಲ್ಲೆ ಘಟನೆ ಬಗ್ಗೆ ನಗರಸಭೆಯ ಅಧ್ಯಕ್ಷರು ರವಿವಾರ ಕರೆದ ತುರ್ತು ಕೌನ್ಸಿಲ್ ಸಭೆಯ ಖಂಡನಾ ನಿರ್ಣಯದಲ್ಲಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿರುವ ಆಸ್ಮಾ ಎಲೆಕ್ಟ್ರಾನಿಕ್ಸ್ & ಕ್ಯಾಸೆಟ್ ಕಾರ್ನರ್ ಅಂಗಡಿಯ ವ್ಯಾಪಾರ ಪರವಾನಿಗೆಯನ್ನು ರದ್ದುಗೊಳಿಸಿ, ಅಂಗಡಿಗೆ ಬೀಗ ಜಡಿಯುವ ನಿರ್ಣಯ ತೆಗೆದುಕೊಳ್ಳಲಾಯಿತು.

ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಮಾತನಾಡಿ, ಕಾರ್ಮಿಕರ ಸುರಕ್ಷತೆಯ ಬಗ್ಗೆ ನಗರಸಭೆಗೆ ಬಹಳ ದೊಡ್ಡ ಜವಾಬ್ದಾರಿ ಇದ್ದು, ಇದರದಲ್ಲಿ ಯಾವುದೇ ರಾಜಿ ಮಾಡುವುದಿಲ್ಲ. ಅನ್ಯಾಯ ಆಗಿರುವ ಕಾರ್ಮಿಕನಿಗೆ ನ್ಯಾಯ ಒದಗಿಸುವುದು ಹಾಗೂ ಆರೋಪಿಗಳಿಗೆ ಯಾವುದೇ ರಕ್ಷಣೆ ನೀಡುವ ಪ್ರಮೇಯವೇ ಇಲ್ಲ ಎಂದರು. ನಗರಸಭೆಯಿಂದ ಪೊಲೀಸರಿಗೆ ಎಲ್ಲ ರೀತಿಯ ಸಹಕಾರವನ್ನು ನೀಡಿದ್ದೇವೆ. ನಗರಸಭೆ ಎಂದಿಗೂ ಕಾರ್ಮಿಕರ ಪರವಾಗಿ ನಿಲ್ಲುತ್ತದೆ. ಆದರೆ ಈ ವಿಚಾರವನ್ನು ಕೆಲವು ಸಂಘಟನೆಗಳು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.

ಸಭೆಯಲ್ಲಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ನಗರಸಭೆ ಇಡೀ ತಂಡ ಪೌರಾಯುಕ್ತರಿಂದ ಪೌರ ಕಾರ್ಮಿಕರವರೆಗಿನ ಎಲ್ಲ ಸಿಬ್ಬಂದಿಗಳ ಪರವಾಗಿ ಇರುತ್ತದೆ. ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಈಗಾಗಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಇಂತಹ ಘಟನೆಯನ್ನು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರ ಸಂಬಂಧಿಕರು ಮಾತ್ರವಲ್ಲ ನನ್ನ ಸಂಬಂಧಿಕರಾಗಲಿ, ನಗರಸಭೆ ಸದಸ್ಯರು ಮಾಡಿದರೂ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಮಿಕರ ಮೇಲೆ ಹಲ್ಲೆ ನಡೆಸುವಂತಹವರಿಗೆ ಸ್ಪಷ್ಟ ಸಂದೇಶ ನೀಡುವ ನಿಟ್ಟಿನಲ್ಲಿ ಈ ಪ್ರಕರಣದಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಅದರಂತೆ ಅಂಗಡಿಯ ಪರವಾನಿಗೆ ರದ್ದುಗೊಳಿಸಿ, ಬೀಗ ಹಾಕುವ ಕೆಲಸ ಮಾಡಲಾಗುವುದು. ಇಂತಹ ಘಟನೆಗಳು ಇನ್ನು ಮುಂದೆ ಎಲ್ಲಿಯೂ ಮರುಕಳಿಸಬಾರದು ಎಂದು ಶಾಸಕರು ತಿಳಿಸಿದರು.
ಅದೇ ರೀತಿ ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ಕೆಲವು ಸಂಘಟನೆಯ ಮುಖಂಡರು ನಗರಸಭೆ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಹೀಯಾಳಿಸಿರುವುದು ಕೂಡ ಖಂಡನೀಯ. ಇವರ ವಿರುದ್ಧವೂ ಖಂಡನಾ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಭೆಗೆ ವಿರೋಧ ಪಕ್ಷದ ಸದಸ್ಯರು ಗೈರು ಹಾಜರಾಗಿರುವ ಬಗ್ಗೆ ಮತ್ತು ಮಾ.16ರಂದು ನಗರಸಭೆ ಎದುರು ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ದಸಂಸ ಸಂಘಟನೆಯ ಮುಖಂಡರ ವಿರುದ್ಧ ಸ್ಥಾಯಿ ಸಮಿತಿಯ ಗಿರೀಶ್ ಅಂಚನ್ ಮಾತನಾಡಿ ಸಾರ್ವಜನಿಕಾಗಿ ಹಲ್ಲೆ ಮಾಡಿದ ಆರೋಪಿಗಳ ವಿರುದ್ದ ಈಗಾಗಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಧರಣಿ ಮಾಡಲೇ ಬೇಕೆಂದರೆ ಹಲ್ಲೆ ಮಾಡಿದ ಆರೋಪಿಗಳ ಅಂಗಡಿ ಎದುರು ಮಾಡಲಿ ಎಂದು ಹೇಳಿದರು.

ಮಾತು ಮುಂದುವರಿಸುತ್ತ ವಿಪಕ್ಷ ಸದಸ್ಯರು ತುರ್ತು ಸಭೆಗೆ ಹಾಜರಾಗದೇ ಕೇವಲ ಬೀದಿಯಲ್ಲಿ ನಿಂತು ಅಧಿಕಾರಿಗಳ ವಿರುದ್ದ ಮಾತನಾಡುವ ಬದಲು ಸಭೆಗೆ ಬಂದು ಖಂಡನಾ ನಿರ್ಣಯದಲ್ಲಿ ಭಾಗವಹಿಸ ಬಹುದಿತ್ತು. ನಮ್ಮ ಉತ್ತಮ ಆಡಳಿತಕ್ಕೆ ಜನ ಆರಿಸಿದ್ದಾರೆ, ವಿಪಕ್ಷದವರು ಇದೇ ರೀತಿಯ ವರ್ತನೆ ತೋರಿದರೆ ಇಗೀರುವ ನಾಲ್ಕು ಸ್ಥಾನವೂ ಕಳೆದುಕೊಳ್ಳುವಿರಿ ಎಂದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಪೌರಾಯುಕ್ತ ಉದಯ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!