ಯಕ್ಷಗಾನ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ಪತ್ನಿಗೆ ಯಕ್ಷಗಾನ ಕಲಾರಂಗ ನೆರವು
ಉಡುಪಿ: ಕಳೆದ ವರ್ಷ ನಿಧನ ಹೊಂದಿದ ಬಡಗತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ನಗರ ಸುಬ್ರಹ್ಮಣ್ಯ ಆಚಾರ್ ಅವರ ಪತ್ನಿ ಸರಸ್ವತಿ ಆಚಾರ್ ಅವರಿಗೆ ಯಕ್ಷಗಾನ ಕಲಾರಂಗದ ವತಿಯಿಂದ ರೂಪಾಯಿ 25 ಸಾವಿರ ನೆರವನ್ನು ನೇಜಾರಿನಲ್ಲಿರುವ ಅವರ ಮನೆಗೆ ಸಂಸ್ಥೆಯ ಪದಾಧಿಕಾರಿಗಳೊಂದಿಗೆ ತೆರಳಿ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಅವರು ನೀಡಿದರು.
ಅವರ ಪುತ್ರಿ ಸೀಮಾಳ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಭರಿಸುತ್ತಿದೆ. ಇದೇ ಸಂದರ್ಭದಲ್ಲಿ ಸೆಲ್ಕೋ ಸಂಸ್ಥೆಯ ವತಿಯಿಂದ ನೀಡಲ್ಪಟ್ಟ ಸೆಲ್ಕೋ ಸೋಲಾರ್ ಹೊಲಿಗೆ ಯಂತ್ರವನ್ನು ಸಂಸ್ಥೆಯ ಎ.ಜಿ.ಎಂ. ಗುರುಪ್ರಕಾಶ್ ಶೆಟ್ಟಿಯವರು ಹಸ್ತಾಂತರಿಸಿದರು. ಕಲಾರಂಗದ ಪದಾಧಿಕಾರಿಗಳ ತಂಡದಲ್ಲಿ ಉಪಾಧ್ಯಕ್ಷ ಎಸ್.ವಿ.ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ಎಚ್. ಎನ್. ಶೃಂಗೇಶ್ವರ ಹಾಗೂ ಎಚ್. ಎನ್. ವೆಂಕಟೇಶ್ ಉಪಸ್ಥಿತರಿದ್ದರು.