ಮಲ್ಪೆ: ಪ್ರವಾಸಿಗರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಮಲ್ಪೆ: ಪ್ರವಾಸಕ್ಕೆ ಬಂದ ಪ್ರವಾಸಿಗರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಮಲ್ಪೆ ಕಡಲ ತೀರದಲ್ಲಿ ನಡೆದಿದೆ. ಬಿ ಎಸ್ ಪ್ರವೀಣ್ ಕುಮಾರ್ ಇವರು ಮಾ.7 ರಂದು ಮೈಸೂರಿನಿಂದ ಮನೆ ಮಂದಿ ಹಾಗೂ ಸಂಬಂಧಿಕರೊಂದಿಗೆ ಮೈಸೂರಿನಿಂದ ಪ್ರಸಾಸ ಹೊರಟಿದ್ದರು.
ಮೈಸೂರಿನಿಂದ ಹೊರಟ ಇವರು, ಹೊರನಾಡು, ಶೃಂಗೇರಿ,ಕೊಲ್ಲೂರು, ಸಿಗಂದೂರು, ಮುರ್ಡೆಶ್ವರ ಪ್ರವಾಸ ಕೈಗೊಂಡು ಮಾ.9 ರಂದು ಮಧ್ಯಾಹ್ನದ ವೇಳೆಗೆ ಮಲ್ಪೆ ಬೀಚ್ ಗೆ ಬಂದಿದ್ದರು. ಮಲ್ಪೆ ಕಡಲ ಕಿನಾರೆಗೆ ಬಂದ ಅವರು, ತಮ್ಮ ವಾಹನವನ್ನು ಪಾರ್ಕಿಂಗ್ ಮಾಡಿ, ಕಡಲ ತೀರಕ್ಕೆ ಹೋಗಿದ್ದರು. ಈ ವೇಳೆ ಪ್ರವೀಣ್ ಕುಮಾರ್ ಅವರ ಅತ್ತೆ ಮಂಡಿ ನೋವು ಇದ್ದ ಕಾರಣ ನೀರಿಗೆ ಇಳಿಯದೇ ತೀರದಲ್ಲಿ ಕುಳಿತಿದ್ದರು. ಆದ್ದರಿಂದ ಮನೆ ಮಂದಿ ತಮ್ಮ ಬಳಿ ಇದ್ದ ಚಿನ್ನಾಭರಣಗಳನ್ನು ಒಂದು ಹ್ಯಾಂಡ್ ಪರ್ಸ್‍ನಲ್ಲಿ ಇಟ್ಟು ಪ್ರವೀಣ್ ಅವರ ಅತ್ತೆಯ ಬಳಿ ನೀಡಿ, ಎಲ್ಲರೂ ನೀರಿಗೆ ಆಡಲು ಇಳಿದಿದ್ದರು.
ಬಳಿಕ ಸಂಜೆ ವೇಳೆಗ ನೀರಿನಲ್ಲಿ ಆಡಿ ಮನೆಯವರೆಲ್ಲಾ ಬಂದು ನೋಡಿದಾಗ ಹ್ಯಾಂಡ್ ಪರ್ಸ್‍ನಲ್ಲಿ ಒಡವೆಗಳು ಇಲ್ಲದಿರುವುದು ತಿಳಿದು ಬಂದಿದೆ. ಈ ಬಗ್ಗೆ ಪ್ರವೀರ್ಣ ಅವರ ಅತ್ತೆ ಬಳಿ ಕೇಳಿದಾಗ ಅವರು ತಮಗೆ 5 ರಿಂದ 10 ನಿಮಿಷ ನಿದ್ದೆ ಬಂದಿರುವುದಾಗಿ ತಿಳಿಸಿದ್ದಾರೆ. ಆದ ಕಾರಣ ಈ ಅವಧಿಯಲ್ಲಿ ಯಾರೋ ಕಳ್ಳರು ಬಂದು ಹ್ಯಾಂಡ್ ಪರ್ಸ್‍ನಲ್ಲಿದ್ದ 10ಗ್ರಾಂನ 9 ಬಿಳಿ ಹರಳಿನ 1 ಚಿನ್ನದ ಉಂಗುರು, 15 ಗ್ರಾಂ ನ 1 ಯಾಪಲ್ ಕಟ್ ಡಿಸೈನ್ ನ ಚಿನ್ನದ ಚೈನ್, ಪ್ರವೀಣ್ ಕುಮಾರ್ ಅವರ ಪತ್ನಿ ರಂಜಿತಾ ರ 10 ಗ್ರಾಂ ನ ಕರಿಮಣಿ ಸರ, 08 ಗ್ರಾಮ್ ನ 2 ಚಿನ್ನದ ಉಂಗುರು, ನಾದಿನಿಯ 5 .5 ಗ್ರಾಮ್ ನ 1 ಚಿನ್ನದ ಉಂಗುರು ಸೇರಿ ಒಟ್ಟು 48.5 ಗ್ರಾಂ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾಗಿರುವ ಚಿನ್ನಾಭರಣದ ಒಟ್ಟು ಮೌಲ್ಯ 2,50,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.