ಉಡುಪಿ: (ಉಡುಪಿ ಟೈಮ್ಸ್ ವರದಿ) ನಗರದ ಸಿಟಿ ಬಸ್ ಸ್ಟಾಂಡ್ ಸಮಿಪದ ಎಲೆಕ್ಟ್ರಾನಿಕ್ಸ್ ಅಂಗಡಿಯ ಸಿಬ್ಬಂದಿಗಳು ಕಸ ವಿಲೇವಾರಿ ವಿಚಾರಕ್ಕೆ ಪೌರ ಕಾರ್ಮಿಕರೊಬ್ಬರಿಗೆ ಹಲ್ಲೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಅಂಗಡಿ ಮಾಲಿಕ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ದಾವೂದ್ ಅಬೂಬಕರ್ ಕ್ಷಮೆ ಕೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಿನ್ನೆ ನನ್ನ ಅಸ್ಮಾ ಎಲೆಕ್ಟ್ರಾನಿಕ್ಸ್ ಅಂಗಡಿಯ ಉದ್ಯೋಗಿಯೊಬ್ಬರು ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿದ ಅಮಾನವೀಯ ಘಟನೆ ನನ್ನ ಗಮನಕ್ಕೆ ಬಂದಿದೆ. ಈ ಘಟನೆಗೆ ಸಂಬಂಧಿಸಿ ನಾನು ಕ್ಷಮೆ ಯಾಚಿಸುತ್ತೇನೆ. ಇದು ಅಕ್ಷಮ್ಯ ಅಪರಾಧವಾಗಿದ್ದು ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ನಾನು ದೇಶದ ಕಾನೂನನ್ನು ಗೌರವಿಸುವವನಾಗಿದ್ದು ಯಾವುದೇ ವ್ಯಕ್ತಿಯೂ ಕೂಡ ಕಾನೂನನ್ನು ಕೈಗೆತ್ತಿಕೊಳ್ಳುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಹಾಗಾಗಿ ಘಟನೆಯ ಬಗ್ಗೆ ಪೆÇಲೀಸ್ ಇಲಾಖೆ ಪಾರದರ್ಶಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ನಾನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದರು.
ಎಂದಿನಂತೆ ಮಾ.12 ರಂದು ಕಸ ವಿಲೇವಾರಿಗೆ ಪೌರ ಕಾರ್ಮಿಕರು ತಮ್ಮ ವಾಹನದೊಂದಿಗೆ ಉಡುಪಿಯ ಅಂಗಡಿಗೆ ತೆರಳಿದ್ದರು. ಈ ವೇಳೆ ಸಿಟಿ ಬಸ್ ಸ್ಟಾಂಡ್ ಸಮೀಪದ ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಹಸಿ ಮತ್ತು ಒಣ ಕಸ ಬೆರೆಸಿರುವುದನ್ನು ಕಾರ್ಮಿಕರೊಬ್ಬರು ಪ್ರಶ್ನಿಸಿದ್ದರು. ಈ ವೇಳೆ ಅಂಗಡಿಯವರು ದರ್ಪದಿಂದ ಪ್ರತಿಕ್ರಿಯೆ ನೀಡಿದ್ದು ಕಾರ್ಮಿಕರು ಮತ್ತು ಅಂಗಡಿವರ ನಡುವೆ ವಾಗ್ವಾದ ನಡೆದಿದೆ.
ಅಲ್ಲದೆ ಅಂಗಡಿ ಸಿಬ್ಬಂದಿಗಳು ಕಾರ್ಮಿಕರಿಗೆ ಬೈದಿದ್ದು ಮಾತ್ರವಲ್ಲದೆ ಹಲ್ಲೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ನಗರ ಸಭೆಯ ಅಧಿಕಾರಿಗಳು ಬಂದ ವೇಳೆ ಅವರೊಂದಿಗೂ ವಾಗ್ವಾದಕ್ಕೆ ಇಳಿದಿದ್ದು , ಅಧಿಕಾರಿಗಳ ಎದುರಲ್ಲೇ ಕಾರ್ಮಿಕರ ಮೇಲೆ ಹಲ್ಲೆಗೆ ಅಂಗಡಿಯವರು ಮುಂದಾಗಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿ ಪ್ರಕರಣ ದಾಖಲಿಸಿಕೊಂಡ ಉಡುಪಿ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದೀಗ ಪ್ರಕರಣವನ್ನು ಸ್ವತಃ ಅಂಗಡಿ ಮಾಲಿಕರೇ ಖಂಡಿಸಿದ್ದು, ಪೌರ ಕಾರ್ಮಿಕರ ಬಳಿ ಕ್ಷಮೆ ಕೇಳಿದ್ದಾರೆ.
| | |
ಕ್ಷಮೆ ಕೇಳಿದ್ರೆ ಎಲ್‍ಲವೂ ಮುಗೀತಾ?