ಶಂಕರ್ ಶಾಂತಿ ಹಲ್ಲೆ ಪ್ರಕರಣ: ಅಮಾಯಕರ ಮೇಲೆ ದೂರು ದಾಖಲಿಸುವ ಹುನ್ನಾರ

ಉಡುಪಿ: ಬಾರ್ಕೂರಿನಲ್ಲಿ ಫೆ.20 ರಂದು ನಡೆದಿದ್ದ ಶಂಕರ್ ಶಾಂತಿ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಾರ್ಕೂರು ಕಾಳಿಕಾಂಬಾ ದೇವಸ್ಥಾನಕ್ಕೆ ಯಾವುದೇ ಸಂಬಂಧವಿಲ್ಲ. ಈ ವಿಚಾರದಲ್ಲಿ ಅಮಾಯಕರ ಮೇಲೆ ದೂರು ದಾಖಲಿಸುವ ಹುನ್ನಾರ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಬಾರ್ಕೂರು ಕಾಳಿಕಾಂಬ ದೇವಸ್ಥಾನದ ವತಿಯಿಂದ ಮನವಿ ಸಲ್ಲಿಸಲಾಯಿತು.

ಈ ಮನವಿಯಲ್ಲಿ ಫೆ.20 ರಂದು ಬಾರ್ಕೂರು-ಕಚ್ಚೂರು ರಸ್ತೆಯ ಪಕ್ಕದಲ್ಲಿ ಈ ಘಟನೆ ನಡೆದಿದೆ. ಈ ಘಟನೆಗೂ ಬಾರ್ಕೂರು ಕಾಳಿಕಾಂಬಾ ದೇವಸ್ಥಾನಕ್ಕೂ ಯಾವುದೇ ಸಂಬಂಧವಿಲ್ಲ. ಅಂದು ಶಂಕರ್ ಶಾಂತಿ ಅವರು, ದೇವಸ್ತಾನದ ಕಾರ್ಯಕರ್ತರು ಬ್ಯಾನರ್, ಫ್ರೇಮ್ ಗಳನ್ನು ಕೂಡಿ ಇಡುವಾಗ ಅವರ ಮೇಲೆ ಹಲ್ಲೆ ಮಾಡಿ ದೇವಸ್ಥಾನದ ಸಭಾಂಗಣದ ಕಿಟಕಿ ಗಾಜುಗಳನ್ನು ಒಡೆದು ಅವರೊಳಗೆ ಸಂಘರ್ಷ ನಡೆದಿರುತ್ತದೆ. ಈ ಬಗ್ಗೆ ಈಗಾಗಲೇ ಬ್ರಹ್ಮಾವರ ಆರಕ್ಷಕ ಠಾಣೆಯಲ್ಲಿ ಎರಡೂ ಕಡೆಯವರಿಂದ ದೂರು ದಾಖಲಾಗಿದೆ.

ಈ ಘಟನೆಗೆ ಸಂಬಂಧಿಸಿ ಅಮಾಯಕರ ಮೇಲೂ ಕೂಡಾ ದೂರು ದಾಖಲಿಸುವ ಹುನ್ನಾರ ನಡೆಯುತ್ತಿದೆ. ಶ್ರೀದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಕ್ಕೆ 400 ರಿಂದ 500 ಜನರ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿಯ ಪ್ರತಿಯೊಬ್ಬ ಸದಸ್ಯನ ಮೊಬೈಲ್ ಸಂಖ್ಯೆಯನ್ನು ಹಾಗೂ ಅವರ ವಿವರಗಳನ್ನು ತೆಗೆದುಕೊಂಡಿದ್ದು, ಈ ಮಾಹಿತಿಯ ಆಧಾರದಂತೆ ಬ್ರಹ್ಮಾವರ ಠಾಣೆಯಿಂದ ಇವರುಗಳಿಗೆ ಕರೆಗಳು ಬರುತ್ತಿವೆ. ಇವರಲ್ಲಿ ಹೆಚ್ಚಿನವರು ಈ ವಿಷಯಕ್ಕೆ ಸಂಬಂಧಪಡದವರಾಗಿದ್ದಾರೆ. ಆದ್ದರಿಂದ ಅವರ ಮನೆಯವರು ದೇವಸ್ಥಾನಕ್ಕೆ ಕರೆ ಮಾಡಿ ತಮ್ಮ ಸಂಕಷ್ಟವನ್ನು ತೋಡಿಕೊಂಡಿರುತ್ತಾರೆ.

ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜ ಸಾವಿರಾರು ಮಂದಿ ಭಾಗವಹಿದ್ದಾರೆ. ಈ ವಿಚಾರಣೆಯಿಂದ ಅಮಾಯಕರು ಭಯಭೀತರಾಗಿರುತ್ತಾರೆ. ಅನವಶ್ಯಕ ಕಾರಣಗಳಿಗೆ ಸಮಾಜದವರನ್ನು ವಿಚಾರಣೆ ಮಾಡಬಾರದು ಹಾಗೂ ಈ ರೀತಿ ವಿಚಾರಣೆ ಮಾಡುವುದನ್ನು ಸಮಾಜ ಖಂಡಿಸುತ್ತದೆ. ಸಮಾಜದ ಅಮಾಯಕರಿಗೆ ಯಾವುದೇ ತೊಂದರೆಯಾಗಬಾರದೆಂದು ಮನವಿಯಲ್ಲಿ ತಿಳಿಸಲಾಗಿದೆ. 

ಬಾರಕೂರು ಶ್ರೀಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಆಚಾರ್ಯ ವಡೇರಹೋಬಳಿ, ಉಡುಪಿ ಜಿಲ್ಲಾ ವಿಶ್ವಕರ್ಮ ಕಾರ್ಮಿಕರ ಸಂಘಟನೆ ಗೌರವಾಧ್ಯಕ್ಷ ಸುಧಾಕರ್ ಆಚಾರ್ಯ ತ್ರಾಸಿ, ಆಡಳಿತ ಮೊಕ್ತೇಸರ ಚಂದ್ರಯ್ಯ ಆಚಾರ್ಯ, ಹಳೆಯಂಗಡಿ ಶ್ರೀದುರ್ಗಾಪರಮೇಶ್ವರಿ ವಿನಾಯಕ ಮಠದ ಅಧ್ಯಕ್ಷ ಬಿ. ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಗುರು ಸೇವಾ ಪರಿಷತ್ತು ಉಡುಪಿ ಅಧ್ಯಕ್ಷ ಸುಧಾಕರ್ ಆಚಾರ್ಯ ಕುಕ್ಕಿಕಟ್ಟೆ, ಉಡುಪಿ ಜಿಲ್ಲಾ ಚಿನ್ನ-ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕಿಶೋರ್ ಆಚಾರ್ಯ, ಮುಖಂಡರಾದ ಎನ್. ಜಯಕರ್ ಆಚಾರ್ಯ, ರತ್ನಾಕರ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!