“ಉಡುಪಿ ಟೈಮ್ಸ್” ನ ಎಲ್ಲಾ ಓದುಗರಿಗೆ ಮಹಾಶಿವರಾತ್ರಿಯ ಶುಭಾಶಯಗಳು

“ಓಂ ನಮಃ ಶಿವಾಯ” ಇದು ಶಿವನ ಆರಾಧನೆಯ ಅತ್ಯಂತ ಶ್ರೇಷ್ಠವಾದ ಮಂತ್ರಗಳಲ್ಲಿ ಒಂದು. ಈ ಮಂತ್ರವು ಆರಂಭ ಎನ್ನುವ ಅರ್ಥವನ್ನು ನೀಡುತ್ತದೆ. ಮತ್ತೊಂದು ಅರ್ಥದಲ್ಲಿ  “ಓಂ ನಮಃ ಶಿವಾಯ”  ಎನ್ನುವುದು ಶಿವನಿಗೆ ಬಾಗುವುದು, ನಮಿಸುವುದು ಎಂಬ ಅರ್ಥವನ್ನೂ ಕೊಡುತ್ತದೆ. ಅದರಂತೆ ಮನುಷ್ಯನಲ್ಲಿರುವ ಅಹಮ್ , ಋಣಾತ್ಮಕ ಆಲೋಚನೆಗಳನ್ನು ತೊಲಗಿಸಿ ಆಂತರಿಕ ಶುದ್ಧತೆಯನ್ನು ಹೊಂದಿ, ಶಿವನಿಗೆ ಶರಣಾಗುವುದು ಎಂಬ ಅರ್ಥವನ್ನೂ ನೀಡುತ್ತದೆ. ಈ ಮಂತ್ರದ ಮೂಲಕ ಶಿವ ಭಕ್ತರು ನಿತ್ಯ ಮಹೇಶ್ವರನ್ನು ಆರಾಧಿಸುತ್ತಾರೆ.

 ಇಂದು ಮಹಾಶಿವ ರಾತ್ರಿ, ಜಗದ ಪಾಲಕ ಪರಮೇಶ್ವರನನ್ನು ಪೂಜಿಸುವ ವಿಶೇಷ ದಿನ ಮಹಾಶಿವರಾತ್ರಿ. ವರ್ಷದ ಪ್ರತಿ ತಿಂಗಳಲ್ಲೂ ಬರುವ ಕೃಷ್ಣಪಕ್ಷದ ಚತುರ್ದಶಿಯನ್ನು ‘ಶಿವರಾತ್ರಿ’ ಎಂದು ಕರೆಯಲಾಗುತ್ತದೆಯಾದರೂ, ಮಾಘ-ಫಾಲ್ಗುಣ ಮಾಸಗಳ ನಡುವೆ ಬರುವ ಕೃಷ್ಣ ಚತುರ್ದಶಿ ದಿನವೇ  ಪರಶೀವನ ಆರಾಧನೆಯ ಭಕ್ತಿ ಪೂರ್ವಕ ಮಹಾಶಿವರಾತ್ರಿ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ರಾತ್ರಿ ಸಮಯದಲ್ಲಿ ಶಿವ ಪಾರ್ವತಿ ಜೊತೆಯಾಗಿ ಭೂಮಿಗೆ ಬರುತ್ತಾರೆ. ಈ ವೇಳೆ ಪರಮೇಶ್ವರನು ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣ ಗೊಳ್ಳುತ್ತಾನೆ. ಈ ದಿನವನ್ನೇ ಶಿವರಾತ್ರಿಯೆಂದು ಭಕ್ತಿ ಪೂರ್ವಕವಾಗಿ ಆಚರಿಸಲಾಗುತ್ತದೆ.  

 ಈ ದಿನದಂದು ದೇಶದಾದ್ಯಂತ ಕೋಟಿ ಕೋಟಿ ಭಕ್ತರು ಶಂಕರನ್ನು ಶ್ರದ್ಧಾ, ಭಕ್ತಿಯಿಂದ ಭಜಿಸುತ್ತಾರೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ ತ್ರಿಲೋಚನನನ್ನು ನಾಲ್ಕೂ ಆಯಾಮಗಳಲ್ಲೂ ಪೂಜೆ ಮಾಡುವ ಮೂಲಕ ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ.

 ಹಬ್ಬ ಹರಿದಿನಗಳಂದು ಸಾಮಾನ್ಯವಾಗಿ ದೇವರಿಗೆ ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಹಗಲು ಹೊತ್ತಿನಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆದರೆ ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷವಾದದ್ದು. ಈ ದಿನ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ಮೂಲಕ ಶಿವನ ಸ್ಮರಣೆ ಮಾಡಲಾಗುತ್ತದೆ. ಇದರ ಹಿಂದೆಯೂ ಒಂದು ಮಹತ್ವವಾದ ಅರ್ಥ ಹಾಗೂ ಸಂದೇಶವಿದೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಪೂಜಿಸಲಾಗುತ್ತದೆ. ಅಂತೆಯೇ ಅಜ್ಞಾನ ತುಂಬಿರುವಲ್ಲಿ ಶಿವ ಸಂಚರಿಸಿ ಜ್ಞಾನ ದೀವಿಗೆಯನ್ನು ಬೆಳಗುತ್ತಾನೆ ಎಂಬುದು ಈ ಆಚರಣೆಯ ಹಿಂದಿರುವ ನಂಬಿಕೆ.

ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ.  ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದೂ ಹಿರಿಯರು ಹೇಳುತ್ತಾರೆ.

ಮಹಾಶಿವರಾತ್ರಿ ದಿನ ಭಕ್ತರು ಶುಚಿರ್ಭೂತರಾಗಿ ಉಪವಾಸದಿಂದಿದ್ದು (ಅಲ್ಪಾಹಾರ ಸೇವನೆ) ಶಿವಧ್ಯಾನ ಮಾಡಬೇಕು. ಶಿವದೇವಾಲಯಗಳಿಗೆ ಭೇಟಿ ನೀಡುವ, ನದಿಗಳಲ್ಲಿ ಸ್ನಾನ ಮಾಡು ಸಂಪ್ರದಾಯವೂ ಇದೆ. ಅಭಿಷೇಕ ಪ್ರಿಯನಾದ ಶಿವನಿಗೆ ವಿವಿಧ ರೀತಿಯ ಅಭಿಷೇಕಗಳು ನಡೆಯುತ್ತವೆ. ವೇದಸೂಕ್ತಗಳನ್ನು ಪಠಿಸಲಾಗುತ್ತದೆ. ರುದ್ರ, ಚಮಕ ಪಠಣದೊಂದಿಗೆ ಯಾಮ ಪೂಜೆ ಶಿವರಾತ್ರಿಯ ವಿಶೇಷ. ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ, ಪದ್ಮಪುಷ್ಪ, ತುಂಬೆ ಹೂ, ತುಳಸಿ, ಕೆಂಪುದಾಸವಾಳಗಳಿಂದ ಅರ್ಚನೆಯೂ ನಡೆಯುತ್ತದೆ. ರಾತ್ರಿ ಜಾಗರಣೆಯ ಸಂದರ್ಭದಲ್ಲಿ ಶಿವ ಪೂಜೆ, ಶಿವಮಹಿಮೆ ಕಥೆಗಳ ಶ್ರವಣ, ಸಂಗೀತ, ಕೀರ್ತನೆಗಳನ್ನು ಹಾಡುವುದರ ಮೂಲಕ ಭಕ್ತರು ಧನ್ಯರಾಗುತ್ತಾರೆ.

ದೇವಾಲಯಗಳಲ್ಲಿ ಸಂಜೆ 6 ಗಂಟೆಯಿಂದ ಮೊದಲ್ಗೊಂಡು ಮುಂಜಾನೆ 6 ಗಂಟೆಯವರೆಗೆ ರುದ್ರಪಠಣದ ಮೂಲಕ ಶಿವ ಸ್ತುತಿ, ಜಾಗರಣೆ ನಡೆಯುತ್ತದೆ. ಪ್ರತಿ 3 ಗಂಟೆಗೊಮ್ಮೆ ಮಂಗಳಾರತಿ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಗೆ ಮಹಾಮಂಗಳಾರತಿ ಆಚರಣೆ ಮೂಲಕ ಜಾಗರಣೆ ಮುಕ್ತಾಯಗೊಳ್ಳುತ್ತದೆ. ಮೊದಲನೆಯ ಆಯಾಮದಲ್ಲಿ ಹಾಲು, ಎರಡನೆಯ ಆಯಾಮದಲ್ಲಿ ಮೊಸರು, ಮೂರನೆಯ ಆಯಾಮದಲ್ಲಿ ತುಪ್ಪ ಹಾಗೂ ನಾಲ್ಕನೆಯ ಆಯಾಮದಲ್ಲಿ ಜೇನುತುಪ್ಪಗಳಿಂದ ಶಿವನಿಗೆ ಅಭಿಷೇಕ ಮಾಡುವ ಪದ್ಧತಿಯೂ ಕೆಲವೆಡೆ ಇದೆ.

ಆಡಂಬರಗಳಿಂದ ಮುಕ್ತನಾಗಿರುವ ಶಿವ ನಿಷ್ಕಲ್ಮಶ, ಪ್ರಾಮಾಣಿಕ ಭಕ್ತಿಗೆ ಒಲಿಯುತ್ತಾನೆ ಎಂಬುದು ಭಕ್ತರ ನಂಬಿಕೆ. ಅಂತೆಯೇ  ಕತ್ತಲೆಯಿಂದ ಬೆಲಕಿನೆಡೆಗೆ ಎಂಬ ಸಂದೇಶ ಸಾರುವ ಮಹಾ ಶಿವರಾತ್ರಿಯು ಜಗತ್ತಿಗೆ ಒಳಿತನ್ನು ತರಲಿ ಎಂಬುದು ನಮ್ಮ ಆಶಯ.

Leave a Reply

Your email address will not be published. Required fields are marked *

error: Content is protected !!