ಪ್ರಚಾರ ಕಾರ್ಯಕ್ರಮದಲ್ಲಿ ವೀಲ್ ಚೇರ್ ನಲ್ಲೇ ಪಾಲ್ಗೊಳ್ಳುವೆ: ಮಮತಾ ಬ್ಯಾನರ್ಜಿ
ಕೋಲ್ಕತಾ: ದಯಮಾಡಿ ಶಾಂತಿ ಕಾಪಾಡಿ… ಎರಡು-ಮೂರು ದಿನದಲ್ಲಿ ನಾನು ವಾಪಸ್ ಆಗಿ ವೀಲ್ ಚೇರ್ ನಲ್ಲೇ ಪ್ರಚಾರ ಮಾಡುತ್ತೇನೆ ಎಂದು ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಹಲ್ಲೆ ಪ್ರಕರಣ ಬಳಿಕ ಇದೇ ಮೊದಲ ಬಾರಿಗೆ ಆಸ್ಪತ್ರೆಯಿಂದಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮಮತಾ ಬ್ಯಾನರ್ಜಿ, ‘ಪ್ರತಿಯೊಬ್ಬರೂ ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ.. ಜನರಿಗೆ ಅನಾನುಕೂಲವಾಗುವಂತಹ ಯಾವುದನ್ನೂ ಮಾಡಬೇಡಿ..ನನ್ನ ಕೈ, ಕಾಲು ಮೂಳೆಗೆ ಪೆಟ್ಟಾಗಿದೆ. ನಾನು ಗಾಯಗೊಂಡಿದ್ದೇನೆ ಎಂಬುದು ನಿಜ. ನಾನು ಎದೆ ನೋವಿನಿಂದ ಬಳಲುತ್ತಿದ್ದೆ ಎಂದು ಹೇಳಿದ್ದಾರೆ.
ಕಾರಿನಿಂದ ಜನರತ್ತ ಕೈ ಬೀಸುತ್ತಿದ್ದಾಗ ಯಾರೋ ಬಲವಾಗಿ ಕಾರಿನ ಬಾಗಿಲನ್ನು ತಳ್ಳಿದ್ದಾರೆ. ಇದರಿಂದ ನನ್ನ ಕಾಲಿಗೆ ಮತ್ತು ಕೈಗೆ ತೀವ್ರ ಪೆಟ್ಟಾಗಿದೆ. ಕಾರಿನ ಬಾಗಿಲಿಗೆ ಸಿಲುಕಿ ಕಾಲಿಗೆ ಗಾಯವಾಗಿದೆ. ವೈದ್ಯರು ನನಗೆ ಔಷಧಿ ನೀಡಿ ಕೋಲ್ಕತಾ ಆಸ್ಪತ್ರೆಗೆ ರವಾನೆ ಮಾಡಿದರು ಮಮತಾ ಬ್ಯಾನರ್ಜಿ ಎಂದು ಹೇಳಿದ್ದಾರೆ.
ಪೆಟ್ಟಾದರೂ ವೀಲ್ ಚೇರ್ ನಲ್ಲೇ ಪ್ರಚಾರ ಮಾಡುತ್ತೇನೆ
ನನ್ನ ಕಾಲಿಗೆ ತೀವ್ರ ಪೆಟ್ಟಾಗಿದೆ. ಇದರಿಂದ ನಮ್ಮ ಪಕ್ಷದ ಪ್ರಚಾರ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಇನ್ನೆರಡು-ಮೂರು ದಿನದಲ್ಲಿ ನಾನು ವಾಪಸ್ ಆಗುತ್ತೇನೆ. ಯಾವುದೇ ಕಾರಣಕ್ಕೂ ನನ್ನ ಪ್ರಚಾರದ ಕಾರ್ಯಕ್ರಮಗಳಿಗೆ ತೊಂದರೆಯಾಗಬಾರದು. ಆದರೆ ವೈದ್ಯರು ವೀಲ್ ಚೇರ್ ನಲ್ಲಿಯೇ ಇರುವಂತೆ ಸಲಹೆ ನೀಡಿದ್ದಾರೆ. ಹೀಗಾಗಿ ನನ್ನ ಮುಂದಿನ ಕಾರ್ಯಕ್ರಮಗಳಿಗೆ ನಾನು ವೀಲ್ ಚೇರ್ ನಲ್ಲಿ ಪಾಲ್ಗೊಳ್ಳುತ್ತೇನೆ. ಯಾವುದೇ ಕಾರಣಕ್ಕೂ ಇದು ಸಭೆಗಳ ಮೇಲೆ ಪರಿಣಾಮ ಬೀರಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.