ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿ: ಉದ್ಧವ್ ಠಾಕ್ರೆ
ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ಮಹಾಮಾರಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗಿದ್ದು, ಕೋವಿಡ್-19 ಹರಡುವುದನ್ನು ತಡೆಯಲು ರಾಜ್ಯದ ಕೆಲವು ಭಾಗಗಳಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಗುರುವಾರ ಹೇಳಿದ್ದಾರೆ.
ಇಂದು ಸರ್ಕಾರಿ ಜೆ ಜೆ ಆಸ್ಪತ್ರೆಯಲ್ಲಿ ಕೋವಿಡ್ -19 ಲಸಿಕೆ ಹಾಕಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ 60 ವರ್ಷದ ಉದ್ಧವ್ ಠಾಕ್ರೆ ಅವರು, “ಮಹಾರಾಷ್ಟ್ರದ ಕೆಲವು ಭಾಗದಲ್ಲಿ ಕೊರೋನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ. ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಸರ್ಕಾರ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಿದೆ ಎಂದು ಹೇಳಿದರು.
ಜನ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸಬೇಕು ಎಂದು ಸರ್ಕಾರ ಮನವಿ ಮಾಡುತ್ತದೆ ಎಂದರು.
ಇದಕ್ಕು ಮುನ್ನ, ಕೋವಿಡ್ -19 ಪ್ರಕರಣಗಳ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ನಾಗ್ಪುರದಲ್ಲಿ ಮಾರ್ಚ್ 15 ರಿಂದ 21 ರವರೆಗೆ “ಕಟ್ಟುನಿಟ್ಟಾದ ಲಾಕ್ ಡೌನ್” ಜಾರಿಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ನಿತಿನ್ ರಾವತ್ ಅವರು ಘೋಷಿಸಿದ್ದರು.
ಮಹಾರಾಷ್ಟ್ರದಲ್ಲಿ ಬುಧವಾರ ಬರೋಬ್ಬರಿ 13,659 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇದು ಈ ವರ್ಷದ ಅತಿ ಹೆಚ್ಚು ದೈನಂದಿನ ಪ್ರಕರಣಗಳಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 22,52,057ಕ್ಕೆ ತಲುಪಿದೆ.