ಕರಾವಳಿಯಲ್ಲಿ ಮತ್ತೊಂದು ಜಿಲ್ಲೆಗೆ ಹೆಚ್ಚಿದ ಕೂಗು

ಉಡುಪಿ: ರಾಜ್ಯದಲ್ಲಿ ಮತ್ತೊಂದು ನೂತನ ಜಿಲ್ಲೆಯ ರಚನೆಯ ಧ್ವನಿ ಮತ್ತೆ ಪ್ರತಿಧ್ವನಿಸುತ್ತಿದೆ. ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕನ್ನು ಪ್ರತ್ಯೇಕ ಕುಂದಕನ್ನಡ ಜಿಲ್ಲೆಯಾಗಿಸಬೇಕೆಂಬ ದಶಕಗಳ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ.

1997ರಲ್ಲಿ ಜೆ.ಎಚ್. ಪಟೇಲರು ಮುಖ್ಯಮಂತ್ರಿಯಾಗಿದ್ದ ಅವಧಿಯಿಂದಲೂ ಕುಂದಗನ್ನಡ ಎಂಬ ಪ್ರತ್ಯೇಕ ಜಿಲ್ಲೆ ಆಗಬೇಕೆನ್ನುವ ಬೇಡಿಕೆಯಿತ್ತು. ಅಂದಿನ ಮುಖ್ಯ ಮಂತ್ರಿಗಳು ಕೂಡ ಎಲ್ಲಿ ಸಹಾಯಕ ಕಮಿಷನರ್ ಕಚೇರಿ ಇದೆಯೋ ಅದನ್ನೇ ಜಿಲ್ಲಾ ಕೇಂದ್ರವಾಗಿ ಮಾಡುವ ಭರವಸೆ ನೀಡಿದ್ರು. ಆದ್ರೆ ಕುಂದಾಪುರದಲ್ಲೇ ಜಿಲ್ಲಾ ಮಟ್ಟದ ಎಸಿ ಕಚೇರಿ, ಎಲ್ಲಾ ಸರ್ಕಾರಿ ಕಚೇರಿ, ಪ್ರವಾಸಿ ತಾಣಗಳು ಸಾಕಷ್ಟಿದ್ದರೂ ಜಿಲ್ಲೆಯಾಗುವ ಭಾಗ್ಯ ಮಾತ್ರ ಉಡುಪಿ ಪಾಲಾಯಿತು.

ಕುಂದಾಪುರ ತಾಲೂಕಿನ ಭೌಗೋಳಿಕ ಅಂಶಗಳನ್ನು ಗಮನಿಸಿದರೆ ಉಡುಪಿ ಜಿಲ್ಲೆಯ 7 ತಾಲೂಕುಗಳ ಪೈಕಿ ಕುಂದಾಪುರಕ್ಕೆ ಅಗ್ರ ಸ್ಥಾನ ಸಿಗುತ್ತದೆ. ಯಾಕೆಂದರೆ ಉಡುಪಿ ಜಿಲ್ಲೆಯ 153 ಗ್ರಾಮಗಳಲ್ಲಿ ಅತೀ ಹೆಚ್ಚು ಅಂದರೆ 65 ಗ್ರಾಮಗಳನ್ನ ಹೊಂದುವ ಮೂಲಕ ಅತೀ ಹೆಚ್ಚು ವಿಸ್ತೀರ್ಣ ಹೊಂದಿರುವ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ ಕುಂದಾಪುರ. ಒಂದು ನಿರ್ಧಿಷ್ಟ ಪ್ರದೇಶಕ್ಕೆ ಜಿಲ್ಲೆ ಎಂದು ಕರೆಸಿಕೊಳ್ಳಲು ಇರಬೇಕಾದ ಎಲ್ಲಾ ಅರ್ಹತೆಗಳಿದ್ದರೂ ಕುಂದಾಪುರಕ್ಕೆ ಇದ್ದರೂ ಅದನ್ನು ಇನ್ನೂ ತಾಲೂಕಾಗಿ ಪರಿಗಣಿಸಲಾಗಿದೆ ಎಂಬುದು ಕುಂದಾಪುರದ ಜನರ ಅಭಿಪ್ರಾಯ.

ಅದೂ ಅಲ್ಲದೆ ಕುಂದಾಪುರ ತಾಲೂಕು ದೊಡ್ಡ ವಿಸ್ತೀರ್ಣ ಹೊಂದಿರುವುದರಿಂದ ಇಲ್ಲಿನ ಗ್ರಾಮೀಣ ಭಾಗದ ಜನತೆ ಯಾವುದೇ ಸರ್ಕಾರಿ ಕೆಲಸ ಆಗಬೇಕಿದ್ದರೆ 50ಕಿ.ಮೀ ಕ್ರಮಿಸಿ ದೂರದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ಬರಬೇಕು. ಇದು ಒಂದೆಡೆಯಾದರೆ ಮತ್ತೊಂದೆಡೆ 50 ಕಿ.ಮೀ ದೂರದಲ್ಲಿರುವ ಭಟ್ಕಳದ ಜನತೆ ಕೂಡ ಎಲ್ಲಾ ರೀತಿಯಲ್ಲಿ ಕುಂದಾಪುರವನ್ನು ಅವಲಂಬಿಸಿಕೊಂಡಿದ್ದಾರೆ. ಯಾಕೆಂದರೆ ಭಟ್ಕಳದ ಜನತೆಗೆ ಅಲ್ಲಿನ ಜಿಲ್ಲಾ ಕೇಂದ್ರಕ್ಕೆ ತೆರಳ ಬೇಕಾದರೆ 170 ಕಿ.ಮೀ ದೂರದ ಕಾರವಾರಕ್ಕೆ ಹೋಗಬೇಕಾಗುತ್ತದೆ. ಇದು ಇಲ್ಲಿನ ಪ್ರಮುಖ ಸಮಸ್ಯೆ ಅಂತಾನೇ ಹೇಳಬಹುದಾಗಿದೆ.

ಇದರೊಂದಿಗೆ ಇಲ್ಲಿನ ಅಭಿವೃದ್ಧಿ ಕಾರ್ಯಗಳು, ಪ್ರವಾಸಿ ತಾಣಗಳ ಅಭಿವೃದ್ಧಿ ಹೀಗೆ ಇನ್ನೂ ಅನೇಕ ವಿಚಾರಗಳಿಂದಾಗಿ ಕುಂದ ಗನ್ನಡ ಜಿಲ್ಲೆಯ ರಚನೆಗೆ ಕುಂದಾಪುರ ಜನರೊಂದಿಗೆ ಭಟ್ಕಳದ ಜನತೆಯೂ ಕೈ ಜೋಡಿಸಿದ್ದಾರೆ. ಈ ಗಾಗಲೇ ಕುಂದಗನ್ನಡ ಮಾತನಾಡುವ ಸಮಾನ ಮನಸ್ಕರು ಒಟ್ಟಾಗಿ ಸೇರಿ ಒಂದು  ಸಮಿತಿ ರಚನೆ ಮಾಡಿ ಜಿಲ್ಲೆ ರಚನೆಯ ಹೋರಾಟಕ್ಕೆ ತಯಾರಾಗಿದ್ದಾರೆ. ಅಲ್ಲದೆ ಈ ಕುರಿತಾಗಿ ಈಗಾಗಲೇ ಸಂಬಂಧಪಟ್ಟ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಕುಂದಗನ್ನಡ ಜಿಲ್ಲೆ ಬೇಡಿಕೆ ಇಟ್ಟಿದ್ದೇವೆ ಅಂತ ಹೇಳುತ್ತಾರೆ ಹೋರಾಟ ಸಮಿತಿಯ ಪ್ರಮುಖರು. ಒಟ್ಟಿನಲ್ಲಿ ಮತ್ತೆ ಮುನ್ನೆಲೆಗೆ ಬಂದಿರುವ ಕುಂದ ಗನ್ನಡ ಜಿಲ್ಲೆಯ ರಚನಾ ಪ್ರಸ್ತಾಪಕ್ಕೆ ಸರಕಾರ ಅಸ್ತು ಅನ್ನುತ್ತಾ..? ಕುಂದ ಕನ್ನಡ ಮಾತನಾಡುವ ಜನರ ದಶಕಗಳ ಹಿಂದಿನ ಕನಸು ನನಸಾಗುತ್ತಾ ಎಂಬುದು ಸದ್ಯ ನಮ್ಮ ನಿಮ್ಮ ಮುಂದಿರುವ ಪ್ರಶ್ನೆ.

Leave a Reply

Your email address will not be published. Required fields are marked *

error: Content is protected !!