ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ಮಾ.22 ರಂದು ಬೃಹತ್ ವಿಧಾನ ಸೌಧ ಚಲೋ
ಉಡುಪಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಮಾ.22 ರಂದು ಬೃಹತ್ ವಿಧಾನ ಸೌಧ ಚಲೋ ಹೋರಾಟ ಬೆಂಗಳೂರಿಲ್ಲಿ ನಡೆಸೋದಾಗಿ ಸಂಯುಕ್ತ ಹೋರಾಟ ಕರ್ನಾಟಕ ಇದರ ಕರಾವಳಿ ವಿಭಾಗದ ಸಂಚಾಲಕರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕಿರಣ್ ಪುಣಚ ಹೇಳಿದ್ದಾರೆ.
ಈ ಕುರಿತು ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿ ಮಾತನಾಡಿದ ಅವರು, ಸರಕಾರದ ಕಾಯ್ದೆಗಳು ರೈತ ಸ್ನೇಹಿಯಾಗಿರದೆ ರೈತ ವಿರೋಧಿಯಾಗಿದೆ. ಈ ಹೋರಾಟದಲ್ಲಿ ದ.ಕ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಂದ ಪ್ರತಿ ಜಿಲ್ಲೆಯ ಕನಿಷ್ಟ 1,000 ಸಾವಿರ ಮಂದಿ ಬಾಗವಹಿಸಬೇಕು ಎಂಬ ತೀರ್ಮಾಣ ಮಾಡಲಾಗಿದೆ. ಸರಕಾರದ ಬೆಲೆ ಏರಿಕೆ, ಉದ್ಯೋಗ ಕಸಿದು ಕೊಳ್ಳುತ್ತಿರುವ ನೀತಿಯ ವಿರುದ್ಧ, ಕೇಂದ್ರ ಸರಕಾರ ಮೂರು ಕೃಷಿ ವಿರೋಧಿ ಮಸೂದೆಗಳನ್ನು ವಾಪಸ್ಸು ಪಡೆಯಬೇಕು, ವಿದ್ಯುತ್ ಖಾಸಗಿ ಕರಣವನ್ನು ಕೈಬಿಡಬೇಕು, ರಾಜ್ಯ ಸರಕಾರ ರೂಪಿಸಿ ಜಾರಿಗೆ ತರಲು ಹೊರಟಿರುವ ಭೂ ಸುಧಾರಣೆ ತಿದ್ದುಪಡಿ ಕಾಯಿದೆ, ಎಪಿಎಂಸಿ. ತಿದ್ದುಪಡಿ ಕಾಯ್ದೆ, ಗೋ ಹತ್ಯ ನಿಷೇದ ಕಾಯ್ದೆಗಳನ್ನು ವಾಪಾಸ್ಸು ಪಡೆಯಬೇಕು ಹಾಗೂ ಕಾರ್ಮಿಕ ಕಾಯ್ದೆ ತಿದ್ದುಪಡಿತರಲು ಹೊರಟಿರುವುದನ್ನು ಕೈ ಬಿಡಬೇಕು. ಮತ್ತು ರಾಜ್ಯದ ಹಲವಾರು ರೈತ, ದಲಿತ, ಕಾರ್ಮಿಕ ವರ್ಗದ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿ ಈ ಚಳುವಳಿ ನಡೆಸಲಾಗುವುದು ಎಂದರು.
ಈ ಬಗ್ಗೆ ಮಾತು ಮುಂದುವರೆಸಿದ ಅವರು, ಈ ಹೋರಾಟದಲ್ಲಿ ಸುಮಾರು 50 ಸಾವಿರಕ್ಕಿಂತಲೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದು, ರಾಜ್ಯದ 31 ಜಿಲ್ಲೆಗಳಿಂದಲೂ ರೈತರು,ದಲಿತರು, ಕಾರ್ಮಿಕರು,ವಿದ್ಯಾರ್ಥಿ ಯುವ ಜನರು, ಮತ್ತು ಮಹಿಳೆಯರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಯುಕ್ತ ಕಿಶಾನ್ ಮೋರ್ಚಾದ ಮುಖಂಡರಾದ ರಾಕೇಶ್ ಟಿಕಾಯತ್, ಡಾ.ದರ್ಶನ್ ಪಾಲ್ ಮತ್ತು ರಾಜ್ಯದ ರೈತ, ದಲಿತ, ಕಾರ್ಮಿಕ ಮುಖಂಡರು ಭಾಗವಹಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ಇದರ ಕರಾವಳಿ ವಿಭಾಗದ ಸಹ ಸಂಚಾಲಕ ಶಾಂತಾರಾಮ ನಾಯಕ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ಯಾದವ ಶೆಟ್ಟಿ, ಕವಿರಾಜ್ ಉಪಸ್ಥಿತರಿದ್ದರು.