ಬ್ಯಾರಿ ಭಾಷೆಯ ಶ್ರೀಮಂತಿಕೆ ಉಳಿವಿಗೆ ಲಿಪಿ ಅಗತ್ಯ: ರಹೀಂ ಉಚ್ಚಿಲ್

ಉಡುಪಿ, ಮಾ.10: 1400 ವರ್ಷಗಳ ಇತಿಹಾಸ ಹೊಂದಿರುವ ಬ್ಯಾರಿ ಭಾಷೆಗೆ ಲಿಪಿ ಇರಲಿಲ್ಲ. ಈವರೆಗೆ ನಾವು ಬರವಣಿಗೆಗೆ ಕನ್ನಡವನ್ನೇ ಅವಲಂಬಿಸಿಕೊಂಡು ಬಂದಿದ್ದೇವೆ. ಭಾಷೆಯ ಶ್ರೀಮಂತಿಕೆ ಉಳಿಸಲು, ಮುಂದಿನ ಜನಾಂಗ ಬ್ಯಾರಿ ಭಾಷೆಯನ್ನು ಕಲಿಯಲು ಅನುಕೂಲವಾಗುವಂತೆ ಲಿಪಿಯನ್ನು ಹುಟ್ಟುಹಾಕಲಾಗಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಉಡುಪಿ ಜಿಲ್ಲಾ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಬುಧವಾರ ಆಯೋಜಿಸಲಾದ ಪೆರ್ನಾಲ್ ಸಂದೋಲ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ದಫ್ ಬಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿ ಮಾತನಾಡಿ, ಎಲ್ಲ ಭಾಷೆ ಮತ್ತು ಸಮುದಾಯದಗಳಿಗೆ ಇರುವಂತೆ ಬ್ಯಾರಿ ಭಾಷೆಗೂ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುವ ನಿಟ್ಟಿನಲ್ಲಿ ಸಮುದಾಯದ ಪ್ರಮುಖರು ಪ್ರಯತ್ನ ಮಾಡ ಬೇಕು. ಈ ನಿಟ್ಟಿನಲ್ಲಿ ಎಲ್ಲರು ಒಟ್ಟಾಗಿ ಹೋರಾಟ ಮಾಡಬೇಕಾಗಿದೆ. ಬ್ಯಾರಿ ಭಾಷೆಯಲ್ಲಿ ತಯಾರಿಸಿದ ಬ್ಯಾರಿ ಸಿನೆಮಾವನ್ನು ಬ್ಯಾರಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿರುವ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಮೈಸೂರಿನಲ್ಲಿ ಪ್ರದರ್ಶಿಸಲು ಅಕಾಡೆಮಿ ಸಹಕಾರ ನೀಡಬೇಕು ಎಂದರು.

ಬರಹಗಾರ ಹಾಗೂ ಉಪನ್ಯಾಸಕ ಅಬೂಬಕ್ಕರ್ ಉಚ್ಚಿಲ ಪೆರ್ನಾಲ್ ಸೌಹಾರ್ದ ಸಂದೇಶ ನೀಡಿ, ಬ್ಯಾರಿಗಳ ಮೂಲ ವೃತ್ತಿ ವ್ಯಾಪಾರ. ಈ ವ್ಯಾಪಾರ ವ್ಯವಹಾರ ನಡೆಸಬೇಕಾದರೆ ಸಮಾಜದಲ್ಲಿ ಸೌರ್ಹಾದತೆಕ್ಕೆ ಅಗತ್ಯ. ಅದನ್ನು ಬ್ಯಾರಿಗಳು ಈ ಹಿಂದಿನಿಂದಲೂ ನಡೆಸಿಕೊಂಡು ಬರುತ್ತಿದ್ದಾರೆ. ಹಾಗಾಗಿ ನಮ್ಮಲ್ಲಿ ಸೌಹಾರ್ದತೆಯ ಬೇರುಗಳು ತುಂಬಾ ಗಟ್ಟಿಯಾಗಿ ಉಳಿದುಕೊಂಡಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಬ್ಯಾರಿ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಪಿ.ಉಮರ್ ಫಾರೂಕ್, ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಬ್ಯಾರಿ, ಕರ್ನಾಟಕ ಹಜ್ ಸಮಿತಿಯ ಮಾಜಿ ಸದಸ್ಯ ಸಲೀಂ ಅಂಬಾಗಿಲು, ಅಕಾಡೆಮಿ ಸದಸ್ಯ ಶಂಶೀರ್ ಬುಡೋಳಿ ಉಪಸ್ಥಿತರಿದ್ದರು.

ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮ ಸ್ವಾಗತಿಸಿದರು. ಸದಸ್ಯ ಸಂಚಾಲಕ ನಝೀರ್ ಪೊಲ್ಯ ವಂದಿಸಿದರು. ಹುಸೇನ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ ದರು. ಬಳಿಕ ಹುಸೇನ್ ಕಾಟಿಪಳ್ಳ ತಂಡದಿಂದ ಬ್ಯಾರಿ ಕವ್ವಾಲಿ ಮದತ್ತು ಸಂಗೀತ ಮತ್ತು ಕಾಪು ಪೊಲಿಪು ಖುವ್ವತುಲ್ ಇಸ್ಲಾಮ್ ದಫ್ ಸಮಿತಿಯಿಂದ ದಫ್ ಕಾರ್ಯಕ್ರಮ ಜರಗಿತು.

Leave a Reply

Your email address will not be published. Required fields are marked *

error: Content is protected !!