ಯಡಿಯೂರಪ್ಪ ನಾಪತ್ತೆಯಾಗಿದ್ದಾರೆ: ಸದನದಲ್ಲಿ ಸಿಎಂ ವಿರುದ್ಧ ಯತ್ನಾಳ್ ವಾಗ್ದಾಳಿ
ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟ ನಡೆದಿದೆ ಸದನದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್ ವಿಧಾನಸಭೆಯಲ್ಲಿ ಬಾವಿಗಳಿದು ಧರಣಿಗೆ ಮುಂದಾದ ಪ್ರಸಂಗ ನಡೆಯಿತು .
ನಮ್ಮ ಸಮಾಜದ ಹೆಸರೇಳಿಕೊಂಡು ಮುಖ್ಯಮಂತ್ರಿ ಆಗಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದರು. ನಿನ್ನೆಯೇ ಸರ್ಕಾರ ಉತ್ತರ ಕೊಡುತ್ತದೆ ಎಂದು ಹೇಳಿದ್ದರೂ ಉತ್ತರ ಕೊಡಬೇಕಾದ ಸಿಎಂ ನಾಪತ್ತೆಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ರೇಣುಕಾಚಾರ್ಯ ಮಧ್ಯಪ್ರವೇಶಿಸಿ ಸಿಎಂ ಯಡಿಯೂರಪ್ಪ ನಾಪತ್ತೆಯಾಗಿಲ್ಲ. ಪಂಚಮಸಾಲಿ ಸಮುದಾಯಕ್ಕೆ ಅಪಾರ ಗೌರವವಿದೆ ಎಂದು ಹೇಳಿದಾಗ ಯತ್ನಾಳ್ ಮತ್ತು ರೇಣುಕಾಚಾರ್ಯ ನಡುವೆ ಕೆಲ ಕಾಲ ಜಟಾಪಟಿ ನಡೆಯಿತು.
ನಮ್ಮ ಸಮುದಾಯ ಕಷ್ಟದ ಜೀವನ ನಡೆಸುತ್ತಿದೆ. ಮುಖ್ಯಮಂತ್ರಿಗಳು ಮೊನ್ನೆ ನಮ್ಮ ಸಮಾಜದ ಸಚಿವರು, ಶಾಸಕರಿಗೆ ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಬೇಡಿಕೆ ಈಡೇರಿಸುವೆ ಎಂದಿದ್ದರು. ಇಂದು ಸದನದಲ್ಲಿ ಮೀಸಲಾತಿ ಜಾರಿಗೊಳಿಸಲು ಎಷ್ಟು ಸಮಯಾವಕಾಶ ಬೇಕೆಂದು ತಿಳಿಸಿ. ಮೀಸಲಾತಿ ಜಾರಿ ಮಾಡುವುದಿಲ್ಲ ಎಂದಾದರೆ ಹಾಗೆಯೇ ತಿಳಿಸಿ. ಮುಖ್ಯಮಂತ್ರಿಗಳು ಇದಕ್ಕೆ ಸ್ಪಷ್ಟ ಉತ್ತರ ಕೊಡಬೇಕು. ಇಲ್ಲವಾದಲ್ಲಿ ನಮ್ಮ ಸಮುದಾಯ ಅಲ್ಲಿ ಆಮರಣಾಂತ ಉಪವಾಸ ವ್ರತ ನಡೆಸುತ್ತಾರೆ, ನಾನು ಇಲ್ಲಿ ಉಪವಾಸ ಸತ್ಯಾಗ್ರಹ ಹೂಡುವೆ ಎಂದು ಯತ್ನಾಳ್ ಎಚ್ಚರಿಸಿದ್ದಾರೆ.