ಪ್ರತಿಫಲಾಪೇಕ್ಷೆ ಬಯಸದೆ ಸಮಾಜದ ಕೆಲಸ ಮಾಡಿದಾಗ ಜನ ಗುರುತಿಸುತ್ತಾರೆ: ಜೆರಾಲ್ಡ್ ಐಸಾಕ್ ಲೋಬೊ
ಉಡುಪಿ: ಗ್ರಾಮ ಪಂಚಾಯಿತಿ ಸದಸ್ಯರು ಅಸಾಹಯಕರಿಗೆ ಸರ್ಕಾರದಿಂದ ದೊರೆಯುವ ಸೇವೆಗಳನ್ನು ಬಡವರಿಗೆ ತಲುಪಿಸಲು ಮೊದಲ ಆದ್ಯತೆ ನೀಡಬೇಕು ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಭಾನುವಾರ ಉಡುಪಿಯ ಶೋಕ ಮಾತಾ ಚರ್ಚ್ ಸಭಾಂಗಣದಲ್ಲಿ ಕೆಥೊ ಲಿಕ್ ಸಭಾ ಉಡುಪಿ ಪ್ರದೇಶ್ ಆಶ್ರಯದಲ್ಲಿ ಉಡುಪಿ ಧರ್ಮಪ್ರಾಂತ್ಯ ದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಯಲ್ಲಿ ಸ್ಪರ್ಧಿಸಿದ ಮತ್ತು ವಿಜೇತರಾದ ಕ್ರೈಸ್ತ ಸಮುದಾಯದ ಅಭ್ಯರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಸೇವೆ ಕ್ರೈಸ್ತ ಸಮುದಾಯದ ಪ್ರಮುಖ ಧ್ಯೇಯವಾಗಿದ್ದು, ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಯಾಗುವ ಮೂಲಕ ಯೇಸುವಿನ ಸೇವೆ ಮಾಡಲು ಉತ್ತಮ ಅವಕಾಶ ಲಭಿಸಿದಂತಾಗಿದೆ. ಪಂಚಾಯಿತಿ ಸದಸ್ಯರಾದವರು ಸೇವೆಯನ್ನು ಒಂದು ವರ್ಗಕ್ಕೆ ಸೀಮಿತವಾಗಿಸದೆ, ಜಾತಿಗೆ ಮಿತಿಗೊಳಿಸದೆ ಸರ್ವರಿಗೂ ಸಮಾನವಾಗಿ ಹಂಚಬೇಕು. ಪ್ರತಿಫಲಾಪೇಕ್ಷೆ ಬಯಸದೆ ಸಮಾಜದ ಕೆಲಸ ಮಾಡಿದಾಗ ಜನರು ಗುರುತಿಸಿ ಬೆಳೆಸುತ್ತಾರೆ ಎಂದು ಸಲಹೆ ನೀಡಿದರು.
ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಕರ್ತವ್ಯದ ಬಗ್ಗೆ ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ಜನಾರ್ದನ ಮರವಂತೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾದ ಶೈನಿ ಕ್ರಾಸ್ತಾ, ಮಾರ್ಗರೇಟ್ ಸೀಮಾ, ಸಿಲ್ವೆಸ್ಟರ್ ಡಿಸೋಜಾ, ಗ್ರೇಸಿ ಕಾರ್ಡೋಜಾ, ವಿನ್ನಿಫ್ರೆಡ್ ಡಿಸೋಜಾ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿದ, ವಿಜೇತ ಅಭ್ಯರ್ಥಿಗಳನ್ನು ಗೌರವಿಸಲಾಯಿತು.
ಉಡುಪಿ ಶೋಕ ಮಾತಾ ಚರ್ಚ್ ಧರ್ಮಗುರು ಚಾರ್ಲ್ಸ್ ಮಿನೇಜಸ್, ಕೆಥೊಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕ ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ನಿಯೋಜಿತ ಅಧ್ಯಕ್ಷೆ ಮೇರಿ ಡಿಸೋಜ, ಉಪಾಧ್ಯಕ್ಷರಾದ ರೋನಾಲ್ಡ್ ಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ರೋಬರ್ಟ್ ಮಿನೇಜಸ್ ಸ್ವಾಗತಿಸಿದರು. ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು.