ಕರ್ನಾಟಕ ಬಜೆಟ್: ಅಪಾರ್ಟ್ ಮೆಂಟ್ ಗಳ ಸ್ಟಾಂಪ್ ಡ್ಯೂಟಿ ಸುಂಕ ಇಳಿಕೆ!
ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ ಮಂಡಿಸಿದ ಬಜೆಟ್ ನಲ್ಲಿ ಮೊದಲ ಬಾರಿಗೆ 35 ಲಕ್ಷದಿಂದ 45 ಲಕ್ಷದ ನಡುವಿನ ಅಪಾರ್ಟ್ ಮೆಂಟ್ ಗಳ ಸ್ಟಾಂಪ್ ಡ್ಯೂಟಿ ಸುಂಕವನ್ನು ಶೇಕಡಾ 5 ರಿಂದ 3ಕ್ಕೆ ಇಳಿಕೆ ಮಾಡಲಾಗಿದೆ.
ಅಫರ್ಡೇಬಲ್ ಹೌಸಿಂಗ್ ಉತ್ತೇಜಿಸಲು ಈ ರೀತಿಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಕಳೆದ ವರ್ಷ ಮಹಾರಾಷ್ಟ್ರ ಕೂಡಾ ಇಂತಹ ನಿರ್ಧಾರ ಕೈಗೊಂಡಿತ್ತು. ಸ್ಟಾಂಪ್ ಡ್ಯೂಟಿ ಕಡಿತದಿಂದ ಅಫರ್ಡೇಬಲ್ ಹೌಸಿಂಗ್ ಮಾರಾಟದಲ್ಲಿ ಸಾಕಷ್ಟು ಪ್ರಗತಿ ಕಂಡುಬಂದಿತ್ತು.
ಆದಾಗ್ಯೂ, ಮುಂಬೈಯಂತೆ ಬೆಂಗಳೂರಿನಲ್ಲಿ ಮನೆಗಳ ಮಾರಾಟದಲ್ಲಿ ಗಮನಾರ್ಹ ರೀತಿಯ ಪ್ರಗತಿಯನ್ನು ನೋಡುವ ಸಾಧ್ಯತೆ ಇಲ್ಲ, ಇದು ಉತ್ತಮ ಅಂಶ ಎಂದು ಅನಿಸುತ್ತಿಲ್ಲ ಎಂದು ಅನರೋಕ್ ಪ್ರಾಪರ್ಟಿ ಕನ್ಸಲ್ಟೆಂಟ್ಸ್ ಮುಖ್ಯಸ್ಥ ಅಂಜು ಪುರಿ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಕೇವಲ ಒಂದು ವರ್ಗಕ್ಕೆ ಮಾತ್ರವಲ್ಲದೆ ಎಲ್ಲಾ ಬಜೆಟ್ ವಿಭಾಗಗಳಲ್ಲಿನ ಆಸ್ತಿಗಳಿಗೆ ಸ್ಟಾಂಪ್ ಡ್ಯೂಟಿ ಕಡಿಮೆಯಾಗಿದೆ ಎನ್ನುವ ಅಂಜು ಪುರಿ, ಬೆಂಗಳೂರಿನಲ್ಲಿ 50 ಲಕ್ಷದಿಂದ 1 ಕೋಟಿ ರೂ.ಗಳ ಬಜೆಟ್ ನ ಮನೆಗಳಿಗೆ ಬೇಡಿಕೆ ಹೆಚ್ಚಿದೆ. ಈ ಆಸ್ತಿಗಳಿಗೆ ಸ್ಟಾಂಪ್ ಡ್ಯೂಟಿ ಸುಂಕ ಶೇ.5ರ ಸನ್ನಿಹದಲ್ಲಿಯೇ ಇರುತ್ತದೆ ಎನ್ನುತ್ತಾರೆ.
ರೆಸಿಡೆನ್ಶಿಯಲ್ ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಸಿಇಒ ರಾಜೇಂದ್ರ ಜೋಶಿ ಕೂಡಾ ಪುರಿ ಮಾತನ್ನು ಒಪ್ಪುತ್ತಾರೆ. 2021-22ರ ಆರ್ಥಿಕ ವರ್ಷಕ್ಕೆ ಸ್ಟಾಂಪ್ ಡ್ಯೂಟಿ ಪ್ರಯೋಜನವನ್ನು ಘೋಷಿಸಲಾಗಿದ್ದರೂ, ಆಸ್ತಿಗಳ ನೋಂದಣಿ ಯೋಜನೆಗಳಿಗೆ ಧೀರ್ಘ ಕಾಲವಧಿ ಬೇಕಾಗುತ್ತದೆ ಎನ್ನುತ್ತಾರೆ.