ಶಿವಮೊಗ್ಗ: ವಿಮಾನ ನಿಲ್ದಾಣದ ಬಳಿ ಭಾರಿ ಪ್ರಮಾಣದ ಸ್ಪೋಟಕ ತುಂಬಿದ್ದ ಎರಡು ವಾಹನಗಳು ಪತ್ತೆಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿ ಸ್ಥಳದಲ್ಲಿ ಎರಡು ವಾಹನದಲ್ಲಿ ಸ್ಪೋಟಕಗಳು ಪತ್ತೆಯಾಗಿದೆ. ಒಂದು ವಾಹನದಲ್ಲಿ 407 ವಾಹನದಲ್ಲಿ 36 ಬಾಕ್ಸ್ ಜಿಲೆಟಿನ್ ಕಡ್ಡಿಗಳು, ಮತ್ತೊಂದು ವಾಹನದಲ್ಲಿ 3,267 ಎಲೆಕ್ಟ್ರಾನಿಕ್ ಡಿಟೊನೇಟರ್ಗಳು ಸೇರಿದಂತೆ ಒಟ್ಟು, 904 ಕೆ.ಜಿ. ಜಿಲೆಟಿನ್ ಕಡ್ಡಿ, 3,267 ಡಿಟೊನೇಟರ್ಗಳು ಪತ್ತೆಯಾಗಿವೆ.
ಈ ಬಗ್ಗೆ ಮಾಹಿತಿ ಪಡೆದ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿಗಳು ಆಗಮಿಸಿ ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕಾಮಗಾರಿ ಸ್ಥಳದಲ್ಲೆ ಕ್ವಾರಿ ಒದಗಿಸಲಾಗಿದೆ. ಇಲ್ಲಿಯೇ ಬಂಡೆ ಸ್ಫೋಟಿಸಿ ಕಾಮಗಾರಿಗೆ ಜೆಲ್ಲಿ ಬಳಕೆ ಮಾಡಬಹುದಾಗಿದೆ. ಇದಕ್ಕೆ ಸ್ಫೋಟಕ ಪೂರೈಕೆ ಮಾಡುವಂತೆ ಚಿಕ್ಕಬಳ್ಳಾಪುರದ ಸ್ಫೋಟಕ ಪೂರೈಕೆ ಕಂಪೆನಿಯೊಂದರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಬಂಡೆ ಸ್ಪೋಟಿಸಲು ಈ ಕಂಪನಿಯವರು ಸ್ಫೋಟಕಗಳನ್ನು ತಂದಿದ್ದರು. ಎರಡು ವಾಹನಗಳನ್ನು ತಂದಿದ್ದ ಸ್ಫೋಟಕಗಳನ್ನು ಹಾಗೆ ಬಿಟ್ಟು ಹೋಗಿದ್ದರಿಂದ, ಆತಂಕ ಸೃಷ್ಟಿಯಾಗಿತ್ತು ಎಂದು ತಿಳಿದುಬಂದಿದೆ.
ಹುಣಸೋಡು ಕ್ವಾರಿಯಲ್ಲಿ ಸ್ಪೋಟ ಪ್ರಕರಣದ ಬಳಿಕ ಸ್ಪೋಟಕ ಬಳಕೆಗೆ ಕಡಿವಾಣ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಪೋಟಕ ಪೂರೈಕೆ ಕಂಪನಿಯವರು ಸ್ಪೋಟಕ ಬಳಕೆ ಬಗ್ಗೆ ಜಿಲ್ಲಾಧಿಕಾರಿ ಅವರ ಅನುಮತಿ ಕೇಳಿದರು. ಮಂಗಳೂರಿನಲ್ಲಿರುವ ಪೆಟ್ರೋಲಿಯಂ ಮತ್ತು ಎಕ್ಸ್ಪ್ಲೋಸಿವ್ಸ್ ಸೇಫ್ಟಿ ಆರ್ಗನೈಸೇಷನ್ನಿಂದ ಅನುಮತಿ ಪಡೆಯುವಂತೆ ಡಿಸಿ ಸೂಚಿಸಿದ್ದರು. ಈ ವೇಳೆ ಅನುಮತಿಗಾಗಿ ಕೇಳಿದಾಗ ಸ್ಪೋಟಕ ಪೂರೈಕೆ ಕಂಪನಿಯವರು ನಿಯಮ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಇದೆ ಗೊಂದಲದಿಂದ ಸ್ಪೋಟಕವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬೇಕಾ ಬಿಟ್ಟಿಯಂತೆ ಸ್ಪೋಟಕವನ್ನು ಸಾಗಣೆ ಮಾಡುವಂತಿಲ್ಲ. 150 ಕಿ. ಮೀ. ಮಾತ್ರ ಸ್ಪೋಟಕ ಸಾಗಣೆ ಮಾಡಬಹುದು. ಆದರೆ, ಸ್ಪೋಟಕ ಪೂರೈಕೆ ಕಂಪನಿಯು ಚಿಕ್ಕಬಳ್ಳಾಪುರದಿಂದ ಶಿವಮೊಗ್ಗದವರೆಗೆ ಸ್ಪೋಟಕ ಪೂರೈಕೆ ಮಾಡಿ ನಿಯಮನ್ನು ಉಲ್ಲಂಘಿಸಿತ್ತು. ಅಲ್ಲಿ ಸ್ಪೋಟಕ ಬಳಕೆಗೆ ಅವಕಾಶವಿಲ್ಲ ಎಂದು ಮಂಗಳೂರಿನ ಪೆಟ್ರೋಲಿಯಂ ಮತ್ತು ಎಕ್ಸ್ಪ್ಲೋಸಿವ್ಸ್ ಸೇಫ್ಟಿ ಆರ್ಗನೈಸೇಷನ್ನಿಂದ ತಿಳಿದು ಬಂದಿತ್ತು. ಹಾಗಾಗಿ ಸ್ಪೋಟಕ ಪೂರೈಕೆ ಕಂಪನಿಯವರು ಸ್ಪೋಟಕಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ವಾಹನದಲ್ಲಿ ಸ್ಪೋಟಕ ಇರುವ ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದೀಪಕ್ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿತ್ತು. ನಿಗದಿತ ದೂರಕ್ಕಿಂತಲೂ ಹೆಚ್ಚು ದೂರ ಸ್ಪೋಟಕ ಸಾಗಣೆ ಮತ್ತು ಆ ಬಳಿಕ ಸ್ಪೋಟಕವನ್ನು ಕೊಂಡೊಯ್ಯದೆ ಅಪಾಯಕಾರಿ ಸ್ಥಿತಿಯಲ್ಲಿ ಬಿಟ್ಟು ಹೋಗಿರುವ ಸಂಬಂಧ, ಚಿಕ್ಕಬಳ್ಳಾಪುರದ ಸ್ಪೋಟಕ ಪೂರೈಕೆ ಕಂಪನಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.
| | |