ಕೊಲ್ಲೂರು ದೇವಸ್ಥಾನದಲ್ಲಿ ಕೋಟ್ಯಂತ ರೂ. ಲೂಟಿ ಹೊಡೆದ ಅಧಿಕಾರಿಗಳು

ಉಡುಪಿ: ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಲ್ಲಿನ ಲೆಕ್ಕ ಪರಿಶೋಧಕರ ವರದಿಯಲ್ಲಿ ಉಂಟಾಗಿರುವ ಅವ್ಯವಹಾರದ ಕುರಿತು ಸೂಕ್ತ ಕ್ರಮ ಕೈಗೊಂಡು ಆರೋಪಿಗಳಿಗೆ ಕಠಿಣ ಶೀಕ್ಷೆ ವಿಧಿಸುವಂತೆ ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘ ಒತ್ತಾಯಿಸಿದೆ.

ಈ ಬಗ್ಗೆ ಉಡುಪಿಯಲ್ಲಿ ಇಂದು ಪತ್ರಿಕಾಗೋಷ್ಟಿ ನಡೆಸಿದ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ, ಕರ್ನಾಟಕದ ವಕ್ತಾರರಾದ ಗುರುಪ್ರಸಾದ ಗೌಡ ಅವರು ಮಾತನಾಡಿ,  ಭಕ್ತರು ಅರ್ಪಿಸಿರುವ ಧನವು ದೇವನಿಧಿಯಾಗಿದ್ದು, ದೇವನಿಧಿಯನ್ನು ಲೂಟಿ ಮಾಡುವುದು ಮಹಾಪಾಪವಾಗಿದೆ. ದೇವನಿಧಿಯನ್ನು ಲೂಟಿ ಮಾಡಲು ಸಾಧನವಾಗಿರುವ ದೇವಸ್ಥಾನಗಳ ಸರಕಾರೀಕರಣವನ್ನು ತಕ್ಷಣ ರದ್ದು ಪಡಿಸಲು ಹೋರಾಡುವುದು ಪ್ರತಿಯೊಬ್ಬ ಭಕ್ತರ ಕರ್ತವ್ಯವಾಗಿದೆ. ಈ ಸರಕಾರಿ ಅಧಿಕಾರಿಗಳ ಮೇಲೆ ತಕ್ಷಣವೇ ಕ್ರಮವನ್ನು ಜರುಗಿಸದೇ ಇದ್ದರೆ ಇದರ ವಿರುದ್ಧ ರಾಜ್ಯವ್ಯಾಪಿ ಆಂದೋಲನವನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.

ಈ ಲೂಟಿಕೋರ ಮತ್ತು ಭ್ರಷ್ಟ ಆಡಳಿತ ವ್ಯವಸ್ಥೆಯ ವಿರುದ್ಧದ ಧರ್ಮದ ಹೋರಾಟದಲ್ಲಿ ಸಮಸ್ತ ಭಕ್ತರು ಭಾಗವಹಿಸಬೇಕು ಎಂದು ಕರೆ ನೀಡಿದರು.
 ದೇವಸ್ಥಾನದ ಆಡಳಿತ ಮಂಡಳಿಯ ಸರಕಾರಿ ಅಧಿಕಾರಿಯು ಕೋಟ್ಯಾಂತರ ಸಂಪತ್ತು ಲೂಟಿ ಮಾಡಿರುವುದು ಮಾಹಿತಿ ಹಕ್ಕು ಅಧಿನಿಯಮದಿಂದ ಬಹಿರಂಗವಾಗಿದೆ. ಆದ್ದರಿಂದ ಭಕ್ತರು ಶ್ರದ್ಧೆಯಿಂದ ಅರ್ಪಿಸಿದ ದಾನದ ವಿನಿಯೋಗವು ಭ್ರಷ್ಟ ಅಧಿಕಾರಿಗಳ ಕಿಸೆಗೆ ಹೋಗುತ್ತಿದ್ದರೆ, ಭಕ್ತರು ದೇವಸ್ಥಾನಗಳಗೆ ಏಕೆ ದಾನ ನೀಡಬೇಕು ಎಂದರು. ಇದೇ ವೇಳೆ ದೇವಸ್ಥಾನಗಳ ಆಡಳಿತ ವ್ಯವಸ್ಥೆಯಲ್ಲಿ ಆಗುತ್ತಿರುವ ಇಂತಹ ಅಹಿತಕರ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

 ಈ ಸಂದರ್ಭ ಮಹಾರಾಷ್ಟ್ರದ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘದ ವಕ್ತಾರ ಸುನೀಲ್ ಘನವಟ್, ಕರ್ನಾಟಕ ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾ ಸಂಘ ಸದಸ್ಯರಾದ ಪ್ರಭಾಕರ ನಾಯಕ್, ಶ್ರೀನಿವಾಸ, ಚಂದ್ರ ಮೊಗೇರ, ಮಧೂಸೂದನ ಅಯ್ಯರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!