ಮಣಿಪಾಲ ವಿದ್ಯಾರ್ಥಿಗಳಿಗೆ ಸೆಕ್ಯೂರಿಟಿ ಗಾರ್ಡ್ ಗಳಿಂದಲೇ ಗಾಂಜಾ ಮಾರಾಟ: ಇಬ್ಬರ ಬಂಧನ
ಮಣಿಪಾಲ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗನ್ನು ಪೊಲೀಸರು ಇಂದು (ಮಾ.8) ಬಂಧಿಸಿದ್ದಾರೆ.
ಒರಿಸ್ಸಾ ಮೂಲದ ಪೂರ್ಣಚಂದ್ರ ದಾಸ್ (23) , ಕಮಲು ಬಂಧಿತ ಆರೋಪಿಗಳು. ಬಂಧಿತರಿಂದ 70,000 ರೂ ಮೌಲ್ಯದ 2 ಕಿಲೋ, 20 ಗ್ರಾಂ ತೂಕದ ಗಾಂಜಾ, 2 ಮೊಬೈಲ್ ಫೋನ್, ಕಪ್ಪು, ನೀಲಿ, ಬೂದು ಬಣ್ಣ ಮಿಶ್ರಿತ ಸೊಲ್ಡರ್ ಬ್ಯಾಗ್ ಮತ್ತು 18 ಪ್ಲಾಸ್ಟಿಕ್ ಚೀಲವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಿಬ್ಬರು ಟ್ಯಾಪ್ಮೀಯಲ್ಲಿ ಕಳೆದ ಐದಾರು ವರ್ಷಗಳಿಂದ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಆರೋಪಿಗಳು ಉಡುಪಿಯ 80 ಬಡಗಬೆಟ್ಟುವಿನ ಶಾಂತಿನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೆನ್ ಅಪರಾಧ ಪೊಲೀಸ್ ಠಾಣೆಯ ಪಿ.ಎಸ್.ಐ ನಾರಾಯಣ ಅವರು ಪೊಲೀಸ್ ಅಧೀಕ್ಷಕರ ಅನುಮತಿ ಪಡೆದು, ಪತ್ರಾಂಕಿತ ಅಧಿಕಾರಿ, ಪಂಚರು ಹಾಗೂ ಸಿಬ್ಬಂದಿಯವರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದ್ದರು. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.