ಬಹುಮತ ಇದ್ದರೂ ಬಿಜೆಪಿಯ ಷಡ್ಯಂತ್ರದಿಂದ ಅಧಿಕಾರ ಕಳೆದುಕೊಂಡೆವು: ಸೊರಕೆ
ಉಡುಪಿ: ಅಲೆವೂರು ಗ್ರಾಮ ಪಂಚಾಯತ್ನಲ್ಲಿ ವಿಜಯಿಗಳಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಅಭಿನಂದನ ಸಮಾರಂಭ ಮಾ.7 ರಂದು ಅಲೆವೂರಿನ ವಿಠ್ಠಲ ಸಭಾಭವನದಲ್ಲಿ ನಡೆಯಿತು. ಸಮಾರಂಭದಲ್ಲಿ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಮಾತನಾಡಿ ವಿಜಯಿಯಾದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ ಅವರು, ನಮ್ಮ ತಂಡ ಉತ್ತಮವಾಗಿದ್ದಾಗ ಜನರಿಗೆ ನಮ್ಮ ಮೇಲೆ ವಿಶ್ವಾಸ ಹುಟ್ಟುತ್ತದೆ. ಈ ನಾಯಕ ಅಥವಾ ಈ ವ್ಯಕ್ತಿ ಮತ ಹಾಕಲು ಸಮರ್ಥರು ಎಂಬ ನಂಬಿಕೆ ಮತದಾರರಲ್ಲಿ ಮೂಡುತ್ತದೆ ಎಂದರು.
ಇದೇ ವೇಳೆ ಮಾತು ಮುಂದುವರೆಸಿದ ಅವರು, ಚುನಾವಣೆ ನಡೆಯುವ ಸಂದರ್ಭದಲ್ಲಿ ಕೆಲವೊಂದು ಕಡೆ ಬಹುಮತ ಇದ್ದರೂ ಕೂಡ ಬೇರೆ ಬೇರೆ ಒತ್ತಡಗಳ ಮೂಲಕ ನಮ್ಮವರ ದಾರಿ ತಪ್ಪಿಸಿ ಕೆಲವು ಪಂಚಾಯತ್ ಗಳಲ್ಲಿ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿಯೂ ಎದುರಾಗಿತ್ತು. ಆದರೂ ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ವಿಚಲಿತರಾಗದೆ ಇಂದು ಗೆಲುವನ್ನು ಪಡೆದುಕೊಳ್ಳುವಲ್ಲಿ ಒಂದು ತಂಡವಾಗಿ ಶ್ರಮಿಸಿ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಆ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನೂತನ ಪಂಚಾಯತ್ ಅಧ್ಯಕ್ಷೆ ಪುಷ್ಪ ಅಂಚನ್ ಉಪಾಧ್ಯಕ್ಷ ಸುಧಾಕರ್ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಲೆ, ಮುಖಂಡರಾದ, ಅಲೆವೂರು ಹರೀಶ್ ಕಿಣಿ, ಉದ್ಯಾವರ ನಾಗೇಶ್ ಕುಮಾರ್, ದಿವಾಕರ್ ಕುಂದರ್, ದಿನೇಶ್ ಪುತ್ರನ್, ಜನಾರ್ಧನ್ ಭಂಡಾರ್ಕರ್, ಅಲೆವೂರು ಗಣಪತಿ ಕಿಣಿ, ಪ್ರವೀಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.