ಉಡುಪಿ: ಪತ್ರಕರ್ತನಿಂದ ಲೈಂಗಿಕ ದೌರ್ಜನ್ಯ – 10 ವರ್ಷ ಜೈಲು ಶಿಕ್ಷೆ ಪ್ರಕಟ
ಉಡುಪಿ: ಅಪ್ರಾಪ್ತ ವಯಸ್ಸಿನ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಚಂದ್ರ ಕೆ.ಹೆಮ್ಮಾಡಿ ಪ್ರಕರಣದ ಆರೋಪಿ. ಈತನ ಮೇಲೆ ದಾಖಲಾದ ವಿವಿಧ ಪ್ರಕರಣಗಳ ಪೈಕಿ ಮೊದಲ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆ ವಿಧಿಸಲಾಗಿದೆ.
ಈತ ತಾನು ಪತ್ರಕರ್ತನೆಂದು ಹೇಳಿಕೊಂಡು ಬೈಂದೂರು ಭಾಗದ ಗ್ರಾಮೀಣ ಪ್ರದೇಶಕ್ಕೆ ತೆರಳಿ ಅಲ್ಲಿನ ಬಾಲಕನೋರ್ವನಿಗೆ ತಾನು ಪ್ರಾಣಿ, ಪಕ್ಷಿ, ಶಾಲಾ ಕಟ್ಟಡದ ಛಾಯಾಚಿತ್ರ ತೆಗೆಯಲು ಸಹರಿಸುವಂತೆ ಕೇಳಿಕೊಂಡಿದ್ದ. ಅಲ್ಲದೆ ಬಾಲಕನನ್ನು ತನ್ನ ಜೊತೆ ಬರುವಂತೆ ಪುಸಲಾಯಿಸಿ ಕರೆದುಕೊಂಡು ಹೋಗಿ, ಆತನ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿದ್ದನು. ಈ ಬಗ್ಗೆ ಬೈಂದೂರು ಠಾಣೆಗೆ ನೀಡಿದ ದೂರಿನಂತೆ 2018 ನವೆಂಬರ್ ತಿಂಗಳಿನಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿತ್ತು.
ಇದರ ನಂತರ ಒಂದೊಂದೆ ಪ್ರಕರಣಗಳು ಬೆಳಕಿಗೆ ಬಂದು, ಬಾಲಕರ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ. ಚಂದ್ರ ಹೆಮ್ಮಾಡಿ ವಿರುದ್ದ ಬೈಂದೂರಿನಲ್ಲಿ 16, ಕೊಲ್ಲೂರು ಠಾಣೆಯಲ್ಲಿ 1, ಗಂಗೊಳ್ಳಿ ಠಾಣೆಯಲ್ಲಿ 3 ಹಾಗೂ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ 1 ಹೀಗೆ ಒಟ್ಟು 21 ಪ್ರಕರಣಗಳು ದಾಖಲಾಗಿವೆ. ಒಬ್ಬ ಆರೋಪಿ ಮೇಲೆ ಪೋಕ್ಸೋ ಪ್ರಕರಣದಲ್ಲೆ ದೇಶದಲ್ಲಿ ಅತಿ ಹೆಚ್ಚಿನ ಪ್ರಕರಣ ದಾಖಲಾಗಿರುವ ಮೊದಲ ಘಟನೆಯಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂದಿಸಿ ವಿಚಾರಣೆ ನಡೆಸಿರುವ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.