ರಾಸಲೀಲೆ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದೂರು ಹಿಂಪಡೆಯಲು ದಿನೇಶ್ ಕಲ್ಲಹಳ್ಳಿ ನಿರ್ಧಾರ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೋಳಿ ಅವರ ರಾಸಲೀಲೆ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ರಮೇಶ್ ಜಾರಕಿಹೋಳಿ ಅವರ ವಿರುದ್ಧ ದೂರು ಹಿಂಪಡೆಯಲು ನಿರ್ಧರಿಸಿದ್ದಾರೆ.
ಮೂಲಗಳ ಪ್ರಕಾರ, ಈ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಕಲ್ಲಹಳ್ಳಿ ತನ್ನ ವಕೀಲರ ಮೂಲಕ ಪೊಲೀಸ್ ಠಾಣೆಗೆ ಪತ್ರ ಕಳುಹಿಸಲು ತೀರ್ಮಾನಿಸಿದ್ದಾರೆ.
ಈ ಪ್ರಕರಣವನ್ನು ಹಿಂಪಡೆಯಲು ಕಲ್ಲಹಳ್ಳಿ ತಮ್ಮದೇ ಲೆಟರ್‌ಹೆಡ್‌ನಲ್ಲಿ ಪತ್ರ ಬರೆದಿದ್ದಾರೆ. ಅವರ ವಕೀಲರು ಈ ಪತ್ರವನ್ನು ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ.
ಕೆಪಿಟಿಸಿಎಲ್‌ನಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಜಾರಕಿಹೋಳಿ ಮಹಿಳೆಯ ಜತೆ ಅಸಭ್ಯವಾಗಿ ನಡೆದುಕೊಂಡಿದ್ದಾರೆಎಂದು ಈ ಹಿಂದೆ ಕಲ್ಲಹಳ್ಳಿ ಆರೋಪಿಸಿದ್ದರು.
ಕಲ್ಲಹಳ್ಳಿ ಮಾರ್ಚ್ 2 ರಂದು ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಜಾರಕಿಹೋಳಿ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಅವರು ಶುಕ್ರವಾರ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾ ಮತ್ತು ಇತರ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ರಮೇಶ್ ಜಾರಕಿಹೋಳಿ ರಾಜೀನಾಮೆ ನೀಡಬೇಕಾಯಿತು. ಬಿಜೆಪಿಯ ಇನ್ನೂ ಮೂವರು ಸಚಿವರ ವಿಡಿಯೋ ಬಿಡುಗಡೆ ಮಾಡುವುದಾಗಿ ಕಾರ್ಯಕರ್ತ ಬೆದರಿಕೆ ಹಾಕಿದ್ದರು. ಆರು ಮಂದಿ ಮಂತ್ರಿಗಳು ನಂತರ ತಡೆಯಾಜ್ಞೆ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದರು ಮತ್ತು ಮಾಧ್ಯಮಗಳಲ್ಲಿ ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ರಕ್ಷಣೆ ಕೋರಿದ್ದರು.