ಮುಂಡಾಸು ಕಟ್ಟಿ, ಹಗ್ಗ ಹಿಡಿದು, ಕೋಣಗಳ ಯಜಮಾನಿಕೆ ಹೊತ್ತ ಬಾಲಕಿಯ ಫೋಟೋ ವೈರಲ್!

ಉಡುಪಿ: ಕಂಬಳ ಕರಾವಳಿಗರ ಅಚ್ಚುಮೆಚ್ಚಿನ ಕ್ರೀಡೆ. ಇದು ಜಾನಪದ ಕ್ರೀಡೆ ಮಾತ್ರ ಆಗಿರದೆ, ಕರಾವಳಿಯ ಸಾಂಸ್ಕøತಿಕ ವೈಭವದ ಪ್ರತೀಕವೂ ಹೌದು. ಅದರಲ್ಲೂ ಕರಾವಳಿಯಲ್ಲಿ ಕಂಬಳ ಸೀಸನ್ ಅಂದ್ರೆ ಕಂಬಳ ಆಯೋಜಕರಿಗೆ ಹಾಗೂ ಕಂಬಳ ಪ್ರಿಯರಿಗೆ ಹಬ್ಬದ ಸಂಭ್ರಮ. ಈ ಕಂಬಳ ಸೀಸನ್‍ನಲ್ಲಿ ವಾರಾಂತ್ಯದಲ್ಲಿ ಜಿಲ್ಲೆಯ ಒಂದಲ್ಲ ಒಂದು ಕಡೆ ಕಂಬಳ ನಡೆಯತ್ತಲೆ ಇರುತ್ತದೆ. ಪ್ರತಿ ಕಂಬಳ ಋತುವಿನಲ್ಲಿ ಒಂದಲ್ಲ ಒಂದು ವಿಶೇಷತೆ ಕಂಡು ಬರುತ್ತಲೆ ಇದೆ. ಅದರಂತೆ ಇತ್ತೀಚೆಗ ಕಾರ್ಕಳದ ಮಿಯಾರಿನ ಲವಕುಶ ಜೋಡುಕರೆ ಕಂಬಳದಲ್ಲಿ ಬಾಲಕಿಯೊಬ್ಬಳು ಕೋಣಗಳೊಂದಿಗೆ ಕೆರೆಗೆ ಇಳಿಯುವ ಮೂಲಕ ಭಾರೀ ಸುದ್ಧಿಯಾಗಿದ್ದಾಳೆ.

ಕೋಣ ಹಿಡಿದು ನಿಂತಿದ್ದ ಈ ಬಾಲಕಿಯ ಪೋಟೋ ಸಾಮಾಜಿಕ ಜಾಲ ತಾಣದಲ್ಲಿ ಭಾರೀ ವೈರಲ್ ಆಗಿದೆ. ಇದು ಪುರುಷರ ಪೌರುಷದ ಗ್ರಾಮೀಣ ಕ್ರೀಡೆಗೆ ಮಹಿಳೆಯರ ಆಗಮನದ ಕಾಲ ಸನ್ನಿಹಿತವಾಗಿದೆ ಎಂಬ ಮುನ್ಸೂಚನೆಯನ್ನು ನೀಡುವಂತಿತ್ತು.

ಬೈಂದೂರಿನ ಪರಮೇಶ್ವರ ಭಟ್ ಮತ್ತು ರಮ್ಯಾ ದಂಪತಿಗಳ ಮಗು ಚೈತ್ರಾ ಮೊತ್ತಮೊದಲ ಬಾರಿಗೆ ಕಂಬಳ ಕೆರೆಗೆ ಇಳಿದಿದ್ದಾಳೆ. ಇತ್ತೀಚೆಗೆ ನಡೆದ ಕಂಬಳದಲ್ಲಿ , ಟೀಶರ್ಟ್ ಹಾಕಿ ಕೊಂಡು ಮುಂಡಾಸು ಕಟ್ಟಿಕೊಂಡು ಹಗ್ಗ ಹಿಡಿದು, ಕೋಣಗಳ ಯಜಮಾನಿಕೆ ಹೊತ್ತು ಕಂಬಳ ಕರೆಗೆ ಇಳಿಯುವ ಈ ಪುಟ್ಟ ಬಾಲಕಿಯ ಗತ್ತಿಗೆ ಕಂಬಳ ಪ್ರಿಯರು ಹುಬ್ಬೇರಿಸಿದ್ದಾರೆ. ಈ ಮೂಲಕ ಪುರುಷ ಪ್ರಧಾನವಾಗಿರುವ ಕಂಬಳ ಕ್ರೀಡೆಯಲ್ಲಿ ಬಾಲಕಿಯ ಪ್ರವೇಶವಾಗಿದೆ. ಕೋಣ ಓಡಿಸದಿದ್ದರೂ ಕಂಬಳ ಗದ್ದೆಗೆ ಹೆಣ್ಮಗಳು ಇಳಿದಿರೋದು ಇದೇ ಮೊದಲಾಗಿದ್ದು ಇದೊಂದು ದಾಖಲೆಯಾಗಿದೆ. ಈ ನಡುವೆ ಕಂಬಳದಲ್ಲಿ ಮಹಿಳಾ ಓಟಗಾರರಿಗೂ ಪ್ರಾಶಸ್ತ್ಯ ನೀಡುವ ಬಗ್ಗೆ ಕಂಬಳ ಅಕಾಡೆಮಿಯಲ್ಲಿ ಚರ್ಚೆಗಳೂ ನಡೆಯುತ್ತಿದೆ.

ಕಾಲ್ತೊಡು ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿ ಓದುತ್ತಿರುವ ಈಕೆಗೆ ಕಂಬಳ ಎಂದರೆ ಅಚ್ಚುಮೆಚ್ಚು, ಕೊಣಗಳ ಮೇಲೆ ಅಕ್ಕರೆ. ಕೋಣಗಳಿಗೆ ಸ್ನಾನ, ಹುರುಳಿ ಬೇಯಿಸಿ ತಿನ್ನಿಸೋದು ಈಕೆಯ ಇಷ್ಟದ ಕೆಲಸ . ಮುಂದೆ ಚೈತ್ರಾ ಕೋಣಗಳನ್ನು ಓಡಿಸಿ ಮೆಡಲ್ ಗೆಲ್ಲುವ ಕನಸು ಇಟ್ಟುಕೊಂಡಿದ್ದಾಳೆ. ಇದೀಗ ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳ ಬಗೆಗಿನ ಈ ಬಾಲಕಿ ಆಸಕ್ತಿಗೆ ಸಾಮಾಜಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!